ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಭಾನುವಾರ ಪತ್ತೆಯಾದ ಕೊರೊನಾ ಸೋಂಕಿತನ ಮೂಲ ಹುಡುಕಾಟಕ್ಕೆ ತಾಲೂಕು ಆಡಳಿತ ಹರಸಾಹಸ ಪಡುವಂತಾಗಿದೆ.
ಸೋಂಕಿತ ವ್ಯಕ್ತಿ ಯಾವುದೇ ಕೊರೊನಾ ರೋಗಿ ಮತ್ತು ಸೋಂಕು ಹರಡಿರುವ ಪ್ರದೇಶದಲ್ಲಿ ಇಲ್ಲದಿದ್ದರೂ ಲಿಂಗಸುಗೂರು ಮತ್ತು ಸರ್ಜಾಪುರ ವ್ಯಕ್ತಿಗಳಲ್ಲಿ ಕೋವಿಡ್-19 ಹರಡಿದ್ದು, ಹೇಗೆ ಎಂಬುದು ಸವಾಲಾಗಿ ಪರಿಣಮಿಸಿದೆ.
ಲಿಂಗಸುಗೂರಿನ ಕೇರಳ ಮೂಲದ ವ್ಯಕ್ತಿ ಮೂರು ತಿಂಗಳಿಂದ ವ್ಯಾಪಾರ ಮಾಡುತ್ತ ಸ್ಥಳೀಯವಾಗಿಯೇ ಇದ್ದಾರೆ. ನೆಗಡಿ, ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆ ದಾಖಲಾದಾಗ ಕೋವಿಡ್ ದೃಢಪಟ್ಟಿದೆ. ಸದ್ಯ ಈ ವ್ಯಕ್ತಿ ಜೊತೆ ವ್ಯವಹಾರಿಕವಾಗಿ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ಅಲ್ಲದೇ ಸರ್ಜಾಪುರದ ಸೋಂಕಿತ ಯುವಕ ಬೆಂಗಳೂರಿನಿಂದ ಆಗಮಿಸಿ 25 ದಿನಗಳಾಗಿವೆ. ಈತನೊಂದಿಗೆ ಪ್ರಯಾಣಿಸಿದ ಪ್ರಯಾಣಿಕರು ಆರೋಗ್ಯವಾಗಿದ್ದಾರೆ. ಹೀಗಾಗಿ ಈ ಇಬ್ಬರು ವ್ಯಕ್ತಿಗಳಿಗೆ ಸೋಂಕು ಹರಡಿದ್ದು, ಹೇಗೆ ಎಂಬ ಕುರಿತ ಅಧ್ಯಯನ ಚುರುಕುಗೊಂಡಿದೆ.
ಸೋಂಕಿತರ ಸಂಪರ್ಕ ಹೊಂದಿದವರ ಹೆಸರು, ವಿಳಾಸ ಪತ್ತೆ ಕೂಡ ಕಷ್ಟವಾಗಿದೆ. ಇವರು ಯಾವ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದರು ಎಂಬುದು ದೃಢಪಟ್ಟಿಲ್ಲ. ಸಾರ್ವಜನಿಕರು ಇಲಾಖೆ ವಿಚಾರಣೆಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಮನವಿ ಮಾಡಿದ್ದಾರೆ.