ಬೆಂಗಳೂರು: ಪ್ರಧಾನಿ ತುರ್ತಾಗಿ ಕ್ರಮ ವಹಿಸಿದ್ದರಿಂದ ಎಲ್ಲ ರಾಜ್ಯಗಳಿಗೂ ತಾರತಮ್ಯ ಮಾಡದೇ ಸೂಕ್ತ ವ್ಯವಸ್ಥೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಗಳಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಶಾಸಕ ಉದಯ ಗರುಡಾಚಾರ್, ಬಿಜೆಪಿ ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್ ಜತೆ ಸೇರಿ ಮಾತನಾಡಿದ ಅವರು, ದೇಶದಲ್ಲಿ 20 ಸಾವಿರ ವೆಂಟಿಲೇಟರ್ ಇತ್ತು. ಅದನ್ನು 80 ಸಾವಿರಕ್ಕೆ ಅಂದರೆ ನಾಲ್ಕು ಪಟ್ಟು ಹೆಚ್ಚಳ ಮಾಡಿದ್ರು. 32 ಹೊಸ ಆಕ್ಸಿಜನ್ ಘಟಕ ಪ್ರಾರಂಭ ಮಾಡಿದೆ. 18 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಬೇರೆ ದೇಶಗಳಿಗೂ ಲಸಿಕೆ ನೀಡಿದ ಹೆಗ್ಗಳಿಕೆ ನಮ್ಮದು. ಇಸ್ರೇಲ್ ಕೂಡ ಯುದ್ಧದ ಸಂದರ್ಭದಲ್ಲೂ ನಮಗೆ ಸಹಾಯ ಮಾಡ್ತಿದೆ. ಪ್ರಧಾನಿ ಕೈಗೊಂಡ ಕ್ರಮಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದರು.
ಯುದ್ಧದ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು:
ಕೇಂದ್ರ, ರಾಜ್ಯ ಸರ್ಕಾರ ನಿರಂತರವಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿವೆ. ಪ್ರತಿಪಕ್ಷಗಳು ಸದಾ ಟೀಕೆ ಮಾಡೋ ಪ್ರವೃತ್ತಿಗೆ ಬಂದುಬಿಟ್ಟಿವೆ. ಇಂಥ ಯುದ್ಧದ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು. ಆದರೆ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡಿವೆ. ಇಂಥ ಕಷ್ಟದ ಸಂದರ್ಭದಲ್ಲೂ ನಮ್ಮ ನಾಯಕರು ಜನರ ಜೊತೆಗೆ ಬೆರೆತು ಕೆಲಸ ಮಾಡ್ತಿದ್ದಾರೆ. ಆಮ್ಲಜನಕ ಪ್ರಮಾಣ 945 ಮೆಟ್ರಿಕ್ ಟನ್ನಿಂದ 1200 ಮೆಟ್ರಿಕ್ ಟನ್ಗೆ ಕೇಂದ್ರ ಸರ್ಕಾರವೂ ಕೂಡ ಹೆಚ್ಚಿಸಿದೆ. ಜೇಮ್ಶೆಡ್ಪುರದಿಂದ 120 ಟನ್ ಆಮ್ಲಜನಕ ಪೂರೈಕೆ ಆಗ್ತಿದೆ. 127 ಕಡೆಗಳಲ್ಲಿ ನಾವು ಆಕ್ಸಿಜನ್ ಘಟಕ ಸ್ಥಾಪನೆ ಮಾಡ್ತೇವೆ. 62 ಆಕ್ಸಿಜನ್ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಹಂಚಿಕೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿವಿಧ ಸಿಎಸ್ಆರ್ ಫಂಡ್ನಿಂದಲೂ ಆಕ್ಸಿಜನ್ ಘಟಕ ಸ್ಥಾಪನೆ ಮಾಡ್ತಿದ್ದೇವೆ. ಜಿಲ್ಲೆಗಳಲ್ಲಿ ಆಕ್ಸಿಜನ್ ನಿವಾರಣೆಗೆ 10 ಸಾವಿರ ಸಿಲಿಂಡರ್ ಪೂರೈಕೆ ಮಾಡ್ತಿದ್ದೇವೆ. ಯಾವ ಯಾವ ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗ್ತಿದೆ ಅಲ್ಲಿಗೆ ವ್ಯವಸ್ಥೆ ಮಾಡ್ತಿದ್ದೇವೆ ಎಂದರು.
ಕೊರೊನಾ ನಿಯಂತ್ರಣಕ್ಕೆ ಬಂದಿದೆ:
ರಾಜ್ಯದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಇನ್ನಷ್ಟು ಕಠಿಣ ನಿರ್ಧಾರಗಳನ್ನು ನಾವು ತೆಗೆದುಕೊಳ್ತೇವೆ. ಮಾರ್ಚ್ ತಿಂಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್ ಇದ್ದವು. ಈಗ 24 ಸಾವಿರ ಆಕ್ಸಿಜನೇಟೆಡ್ ಬೆಡ್ ಲಭ್ಯವಿದೆ. ಇಷ್ಟು ದೊಡ್ಡ ಏರಿಕೆ ಮಾಡಿರುವುದು ನಮ್ಮ ಸರ್ಕಾರ, ಉಸ್ತುವಾರಿ ಸಚಿವರು. 444 ಐಸಿಯು ಮಾತ್ರ ಇದ್ದಿದ್ದು ಈಗ 1445 ಐಸಿಯು ಬೆಡ್ ಇದೆ. 610 ಮಾತ್ರ ವೆಂಟಿಲೇಟರ್ ಬೆಡ್ ಇದ್ದವು. ಈಗ 1248 ವೆಂಟಿಲೇಟರ್ ಬೆಡ್ಗಳು ನಮ್ಮ ಬಳಿ ಇವೆ. 10-15 ಪಟ್ಟು ಬೆಡ್ಗಳನ್ನು ಜಾಸ್ತಿ ಮಾಡಿರುವುದು ಸರ್ಕಾರ ಜನರ ಪರವಾಗಿದೆ ಎನ್ನೋದಕ್ಕೆ ಉದಾಹರಣೆ. ರೆಮ್ಡಿಸಿವಿರ್ ಕೊರತೆ ಇದ್ದ ಕಾರಣ 3.01 ಲಕ್ಷ ಹಂಚಿಕೆ ಮಾಡಲಾಗಿದೆ. ಮೂರನೇ ಅಲೆ ಎದುರಿಸುವುದಕ್ಕೆ ನಾವೂ ಕೂಡ ಸಿದ್ಧರಾಗಿದ್ದೇವೆ. ಮಕ್ಕಳಿಗೆ ಕೋವಿಡ್ ಎದುರಿಸಲು ಪ್ರತಿ ತಾಲೂಕಲ್ಲೂ ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಬೇಕಾದಂತ ಹಣ ಬಿಡುಗಡೆ ಕೂಡ ಜಿಲ್ಲಾಧಿಕಾರಿಗಳ ಅಕೌಂಟ್ಗೆ ಹಾಕಲಾಗಿದೆ. ನಮ್ಮ ಪಕ್ಷ ಕೂಡ ಕೊರೊನಾ ತಡೆಗಟ್ಟಲು ಹಿಂದೆ ಬಿದ್ದಿಲ್ಲ ಎಂದರು.
ಆತ್ಮಸಾಕ್ಷಿಯಾದರೂ ನಿಮಗೆ ಸಿಗಬಹುದು:
ನಿನ್ನೆ ಸಿಎಂ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ಯಾಕೇಜ್ ಘೋಷಣೆ ಮಾಡಿದ ತಕ್ಷಣ ವಿರೋಧಿಸುವ ಚಾಳಿ ಮುಂದುವರೆಸಿದ್ದಾರೆ. ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣ ಕೊಟ್ಟಿದ್ದೀರಿ ಅಂತ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ ಹೇಳಬೇಕು, ಯಾಕೆ ಕಾರ್ಮಿಕ ಇಲಾಖೆ ಹಣ ಕಾರ್ಮಿಕರಿಗೆ ಬಳಸಬಾರದು. ಸಿದ್ದರಾಮಯ್ಯನವರು ಎಂಎಲ್ಎ ಫಂಡ್ ಬಿಡುಗಡೆ ಮಾಡಿ ಪಾರ್ಟಿ ಫಂಡ್ ಥರ ಪ್ರಚಾರ ತಗೊಂಡರು. ಕಾಂಗ್ರೆಸ್ನಿಂದ ಪಾರ್ಟಿ ಫಂಡ್ ಕೊಟ್ಟರೆ ಅಷ್ಟು ಪ್ರಚಾರ ಪಡೆಯಲಿ. ಕಾರ್ಮಿಕ ಇಲಾಖೆ ಹಣ, ಸರ್ಕಾರದ ಹಣ. ಅದನ್ನು ಕಾರ್ಮಿಕರಿಗೆ ಬಳಸಿದ್ದೇವೆ. ಕಾಂಗ್ರೆಸ್ನವರು ಆರೋಪ, ಅಪಪ್ರಚಾರ ಮಾಡೋದು ಬಿಟ್ಟು ಬೇರೆ ಏನೂ ಇಲ್ಲ. ಅಪಪ್ರಚಾರ ಮಾಡಿ ಪ್ರಚಾರ ತಗೊಳ್ತಿದ್ದಾರೆ ಕಾಂಗ್ರೆಸ್ನವರು. ಕಾಂಗ್ರೆಸ್ನವರಿಗೆ ಅಧಿಕಾರ ಮಾತ್ರ ಮುಖ್ಯ. ಬಿಜೆಪಿಯವರಿಗೆ ದೇಶ ಮುಖ್ಯ. ಟೂಲ್ ಕಿಟ್ ಮೂಲಕ ದೇಶದ ಮಾನ ತೆಗೆಯೋದು ಬಿಟ್ಟು ದೇಶದ ಜನರ ಪರವಾಗಿ ನಿಲ್ಲಲಿ. ಕಷ್ಟದ ಸಂದರ್ಭದಲ್ಲಿ ಜನರ ಜೊತೆಗೆ ನಿಂತ್ವಿ ಅನ್ನೋ ಆತ್ಮಸಾಕ್ಷಿಯಾದರೂ ನಿಮಗೆ ಸಿಗಬಹುದು. ಅಪಪ್ರಚಾರದಿಂದ ಪ್ರಚಾರ ತಗೊಳ್ಳೋದು ಕಾಂಗ್ರೆಸ್ ಪಾರ್ಟಿಗೂ ಒಳ್ಳೆದಲ್ಲ, ಸಮಾಜಕ್ಕೂ ಒಳ್ಳೆದಲ್ಲ ಎಂದರು.