ಧಾರವಾಡ: ಕಣ್ಮುಚ್ಚಿ ಬಿಡುವಷ್ಟರಲ್ಲಿ ನಿರ್ಮಾಣ ಹಂತದ ಕಟ್ಟಡ ನೆಲಕ್ಕೆ ಉರುಳಿತ್ತು. ಮಾರ್ಚ್ 19ರಂದು ಧಾರವಾಡ ನಗರದ ಕುಮಾರೇಶ್ವರ ಬಡಾವಣೆಯ ನಿರ್ಮಾಣ ಹಂತದ ಕಟ್ಟಡ ಕುಸಿತ ಇಡೀ ಧಾರವಾಡವನ್ನೇ ಬೆಚ್ಚಿ ಬೀಳಿಸಿತ್ತು.
2 ತಿಂಗಳ ಹಿಂದೆ ನಡೆದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮಾನವೀಯ ನೆರವು ಪ್ರಶಂನೀಯ. ಆ ದುರ್ಘಟನೆಯಲ್ಲಿ ಬರೋಬ್ಬರಿ 19 ಜನ ಮೃತಪಟ್ಟರು. ಹೀಗೆ ಕುಸಿದ ಕಟ್ಟಡದ ತೆರವು ಕಾರ್ಯಾಚರಣೆ ಸರ್ಕಾರ, ಜಿಲ್ಲಾಡಳಿತಕ್ಕೆ ಸುಲಭದ ಕೆಲಸವಾಗಿರಲಿಲ್ಲ. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸಬೇಕು. ತೆರವಿಗೆ ಅಗತ್ಯವಿರುವ ತಂತ್ರಜ್ಞಾನ, ವಾಹನಗಳ ಜತೆಗೆ ಮಾನವ ಶಕ್ತಿಯು ತುಂಬಾ ಅಗತ್ಯವಿತ್ತು. ಘಟನೆ ನಡೆದ ಹತ್ತೇ ನಿಮಿಷಕ್ಕೆ ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿತು.
ಹತ್ತಾರು ಜೆಸಿಬಿ ಯಂತ್ರಗಳು, ದೊಡ್ಡ ದೊಡ್ಡ ಕ್ರೇನ್ಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಲಾಗಿತ್ತು. ಬರೋಬ್ಬರಿ 7 ದಿನ ನಡೆದ ಕಾರ್ಯಾಚರಣೆಯಲ್ಲಿ ಅನೇಕ ಸವಾಲುಗಳನ್ನು ಜಿಲ್ಲಾಡಳಿತ, ಪೊಲೀಸ್ ಸಿಬ್ಬಂದಿ, ವಿಶೇಷ ತಂಡಗಳು ಯಶಸ್ವಿಯಾಗಿ ಎದುರಿಸಿವೆ.
ವಿಶೇಷ ತಂಡಗಳ ಜತೆ ಸ್ಥಳೀಯವಾಗಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಆಹಾರ, ನೀರು ಒದಗಿಸುವಲ್ಲಿ ಅನೇಕ ಮಾನವೀಯ ಮನಸ್ಸುಗಳು ಕೈಜೋಡಿಸಿದ್ದು, ಜಿಲ್ಲಾಡಳಿತದ ಮೇಲಿನ ಖರ್ಚನ್ನು ತಗ್ಗಿಸಿವೆ. ಸ್ಥಳೀಯರ ಉದಾರ ಮನಸ್ಥಿತಿಯೇ ಜಿಲ್ಲಾಡಳಿತಕ್ಕೆ ಕಡಿಮೆ ವೆಚ್ಚದಲ್ಲಿ ಕಾರ್ಯಾಚರಣೆ ಮಾಡುವಲ್ಲಿ ಸಹಕಾರಿಯಾಗಿದೆ. ಒಂದು ವಾರ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ, ಅದಕ್ಕೆ ತಗಲಿರುವ ಒಟ್ಟು ಖರ್ಚು ಕೇವಲ 27 ಲಕ್ಷ ರೂಪಾಯಿ. ಇದು ಜಿಲ್ಲಾಡಳಿತಕ್ಕೂ ಅಚ್ಚರಿ ಮೂಡಿಸಿದೆ.
ದುರ್ಘಟನೆ ಸಂಭವಿಸಿದ ಅರ್ಧ ಗಂಟೆಯಲ್ಲಿಯೇ ಹತ್ತಕ್ಕೂ ಹೆಚ್ಚು ಜೆಸಿಬಿಗಳು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಜೆಸಿಬಿ, ಕ್ರೇನ್ಗಳಿಗೆ ಇಂಧನ ತಂದು ಹಾಕಲೆಂದೇ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ನಿರಂತರವಾಗಿ ಕೆಲಸ ಮಾಡಿದ ಎಷ್ಟೋ ಜೆಸಿಬಿ ಯಂತ್ರಗಳ ಮಾಲೀಕರು ಜಿಲ್ಲಾಡಳಿತಕ್ಕೆ ಬಿಲ್ ಸಲ್ಲಿಸಿಯೇ ಇಲ್ಲ. ಈ ಬಗ್ಗೆ ಅಧಿಕಾರಿಗಳು ವಿಚಾರಿಸಿದಾಗ, ಸಮಾಜಕ್ಕೆ ತಮ್ಮಿಂದ ಸಣ್ಣದೊಂದು ಸೇವೆ ಸಲ್ಲಿಸಲಾಗಿದೆ ಅಂತಾ ಹೇಳಿ ದೊಡ್ಡತನ ಮೆರೆದಿದ್ದಾರೆ.
ಇನ್ನು ವಾರವಿಡೀ ಜಿಲ್ಲಾಡಳಿತ ಜನರನ್ನು ರಕ್ಷಿಸೋ ಕೆಲಸದಲ್ಲಿ ಮುಳುಗಿತ್ತು. ಕಾರ್ಯಾಚರಣೆಗೆ ತೊಡಗಿದ ಸಿಬ್ಬಂದಿಗೆ ಉಪಹಾರ, ಊಟ, ನೀರಿನ ವ್ಯವಸ್ಥೆಯನ್ನು ಸ್ಥಳೀಯ ಸಂಘ-ಸಂಸ್ಥೆಗಳು, ಜನರು ನೋಡಿಕೊಂಡಿದ್ದರಿಂದ ಸಹಜವಾಗಿಯೆ ಜಿಲ್ಲಾಡಳಿತದ ಅರ್ಧ ಜವಾಬ್ದಾರಿ ಕಡಿಮೆಯಾಗಿತ್ತು.
ಅಲ್ಲಿನ ಸುತ್ತಲಿನ ನಿವಾಸಿಗಳು ನಿರಂತರವಾಗಿ ಅನ್ನ ದಾಸೋಹ ನಡೆಸಿಬಿಟ್ಟರು. ಇದರಿಂದಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿ ತಮಗೆ ಕೊಂಚ ಬಿಡುವು ಸಿಕ್ಕಾಗ ಊಟ ಮಾಡಿಕೊಂಡು ಬಂದು ಕಾರ್ಯಾಚರಣೆ ಮುಂದುವರೆಸುತ್ತಿದ್ದರು. ಇದೆಲ್ಲದರ ಪರಿಣಾಮ ಒಂದು ಕಡೆ 57 ಜನರನ್ನು ರಕ್ಷಿಸುವಲ್ಲಿ ಸಹಾಯವಾದರೆ, ಮತ್ತೊಂದು ಕಡೆ ಜಿಲ್ಲಾಡಳಿತದ ಆರ್ಥಿಕ ಹೊರೆ ಕಡಿಮೆ ಮಾಡಿದೆ.