ಬಾಗೇಪಲ್ಲಿ: ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಿ ಸಂಪನ್ಮೂಲ ಸಂಗ್ರಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಖಾಸಗೀಕರಣ ತಿದ್ದುಪಡಿ ಕಾಯ್ದೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಬೆಸ್ಕಾಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಆತ್ಮನಿರ್ಭರ್ ಭಾರತ್ ಯೋಜನೆಯ ಭಾಗವಾಗಿ ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ ಉತ್ಪಾದನೆ, ವೈಮಾನಿಕ ಕ್ಷೇತ್ರ, ಸಾಮಾಜಿಕ ಮೂಲ ಸೌಲಭ್ಯ ಅಭಿವೃದ್ಧಿ, ಬಾಹ್ಯಾಕಾಶ, ಅಣುಶಕ್ತಿ, ಇಂಧನ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಿ ಸಂಪನ್ಮೂಲ ಸಂಗ್ರಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ತಾಲೂಕು ಬೆವಿಕಂ ಉಪ ವಿಭಾಗದ ಆವರಣದಲ್ಲಿ ಅಧಿಕಾರಿಗಳು ಹಾಗೂ ಸಹ ನೌಕರರು ಕಪ್ಪು ಪಟ್ಟಿ ಧರಸಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2020 ವಿದ್ಯುತ್ ತಿದ್ದುಪಡಿ ವಿಧೇಯಕ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಹಾಗೂ ಹೊರ ಗುತ್ತಿಗೆ ಪದ್ದತಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಜೊತೆಗೆ ಸರ್ಕಾರ ತಿದ್ದುಪಡಿ ಕಾಯ್ದೆ ಕೈ ಬಿಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗದ ಎಇಇ ಕೆ. ಆರ್. ಸೋಮಶೇಖರ್ ಮಾತನಾಡಿ, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು, ಮುಖ್ಯಮಂತ್ರಿಗಳು ಈ ತಿದ್ದುಪಡಿ ಕಾಯ್ದೆಗೆ ಯಾವುದೇ ಕಾರಣಕ್ಕೂ ಸಮ್ಮತಿ ಸೂಚಿಸಬಾರದು. ತಿದ್ದುಪಡಿ ಜಾರಿಗೆ ತಂದರೆ ರೈತರು, ಸಣ್ಣಪುಟ್ಟ ಉದ್ಯಮಿಗಳು, ಬಡತನ ರೇಖೆಗಿಂತ ಕೆಳಗಿರುವ ಗ್ರಾಹಕರಿಗೆ ತೊಂದರೆಯಾಗಲಿದೆ ಎಂದರು.