ವಾರಣಾಸಿ: ಗಂಗೆಯ ಬೀಡು, ದೇಗುಲ ನಗರಿ, ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದರು. ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋನಲ್ಲಿ ಭಾಗಿಯಾದರು.
ದೇವನಗರಿ ಎಂದೇ ಬಿಂಬಿತವಾಗಿರುವ ವಾರಾಣಸಿಯಲ್ಲಿ ಪ್ರಧಾನಿ ಮತಯಾಚನೆ ನಡೆಸಿದರು. ಅದಕ್ಕೂ ಮುನ್ನ ಬನಾರಸ್ ವಿಶ್ವವಿದ್ಯಾಲಯದ ಪಂಡಿತ್ ಮದನ್ ಮೋಹನ್ ಮಾಳವಿಯಾ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದರು. ಸುಮಾರು ಆರು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ನಡೆದ ಬೃಹತ್ ರ್ಯಾಲಿ 4ಗಂಟೆಗಳ ಕಾಲ ನಡೆಯಿತು.
ರೋಡ್ ಶೋ ನಡೆಸುವುದಕ್ಕೂ ಮುನ್ನ ಪ್ರಧಾನಿ ಕಾಲಭೈರವನ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ 6 ಕಿಲೋ ಮೀಟರ್‌ವರೆಗೂ ಮೋದಿಯವರದ್ದೇ ಮಾತು.. ಪಾಂಡೆ ಹವೇಲಿ, ಮದನ್‌ಪುರ, ಜುಂಗಬಂದಿ, ಗೊಡೋಲಿಯಾ, ಲಂಕಾ ಘಾಟ್, ರವಿದಾಸ್ ಘಾಟ್, ಅಸ್ಸೀ ಘಾಟ್, ಕಾಶಿ ವಿಶ್ವನಾಥ ನಂತರ ದಶಾಶ್ವಮೇಧ ಘಾಟ್‌ನಲ್ಲಿ ಈ ಮತಯಾತ್ರೆ ಅಂತ್ಯಗೊಂಡಿತು.ಚುನಾವಣಾ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಸೇರಿದ್ದ ಕಾರಣ ಪೊಲೀಸರು ಭದ್ರಕೋಟೆಯನ್ನೇ ನಿರ್ಮಿಸಿದರು. ಡ್ರೋಣ್ ಕ್ಯಾಮರಾಗಳ ಕಣ್ಗಾವಲು ಹಾಕಲಾಗಿತ್ತು. ರಸ್ತೆಯುದ್ದಕ್ಕೂ ನೆರೆದಿರುವ ಕೇಸರಿ ಕಾರ್ಯಕರ್ತರು ಮೋದಿ ಮೋದಿ ಎಂದು ಜಯಘೋಷ ಹಾಕಿದರು.
ಈ ಮತಯಾತ್ರೆ ಮುಕ್ತಾಯಗೊಳ್ಳುತ್ತಿದ್ದಂತೆ ನರೇಂದ್ರ ಮೋದಿ ದಶಾಶ್ವಮೇಧಘಾಟ್‌ನಲ್ಲಿ ಗಂಗಾರತಿ ನೆರವೇರಿಸಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಿಎಂ ಯೋಗಿ ಆದಿತ್ಯನಾಥ್ ಸೇರಿ ಅನೇಕರು ಸಾಥ್ ನೀಡಿದರು. ನರೇಂದ್ರ ಮೋದಿ ನಾಳೆ ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಭರ್ಜರಿ ರೋಡ್ ಶೋ ನಡೆಸಿ ಮತದಾರರ ಮನವೊಲಿಸಿದರು.
ರೋಡ್ ಶೋ ಆರಂಭಿಸುವುದಕ್ಕೂ ಮುನ್ನ ಬನಾರಸ್ ವಿಶ್ವವಿದ್ಯಾಲಯದ ಪಂಡಿತ್ ಮದನ್ ಮೋಹನ್ ಮಾಳವಿಯಾ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದರು. ತದನಂತರ ಸುಮಾರು ಆರು ಲಕ್ಷ ಕಾರ್ಯಕರ್ತರೊಂದಿಗೆ ಮೋದಿ ರೋಡ್ ಶೋನಲ್ಲಿ ಭಾಗಿಯಾಗಿ ಮತಬೇಟೆ ನಡೆಸಿದರು. ಮೋದಿ ಸ್ವಾಗತಕ್ಕಾಗಿ 101 ಸ್ವಾಗತ ಕೇಂದ್ರ ತೆರೆಯಲಾಗಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.