ಬೆಂಗಳೂರು: ದೇಶದ ಭದ್ರತೆ,ರಕ್ಷಣೆ ವಿಷಯದಲ್ಲಿ ರಾಜೀಮಾಡಿಕೊಳ್ಳುವ ಅಂಶ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಿರುವ ಕಾಂಗ್ರೆಸ್ ಪಕ್ಷ ಮತ್ತವರ ಮಿತ್ರಪಕ್ಷಗಳ ಅಭ್ಯರ್ಥಿಗಳ ಠೇವಣಿ ಕಳೆಯುವ ಮೂಲಕ ತಕ್ಕ ಪಾಠ ಕಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಮತ್ತೊಮ್ಮೆ ಮೋದಿ ರ್ಯಾಲಿ ನಡೆಯಿತು. ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿತು. ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿ ಅವರಿಗೆ ರಾಜ್ಯದ ನಾಯಕರು ಕಮಲದ ಚಿಹ್ನೆನೀಡಿ ಪೇಟ ತೊಡಿಸಿ ಶಾಲು ಹೊದಿಸುವ ಜೊತೆಗೆ ಬಿಲ್ಲು ಬಾಣವನ್ನು ನೀಡಿ ಸ್ವಾಗತ ಮಾಡಿದರು. ನಂತರ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹಾಗೂ ಮಾಜಿ ಶಾಸಕ ವಿಜಯಕುಮಾರ್ಗೆ ಶ್ರದ್ದಾಂಜಲಿ ಅರ್ಪಿಸಿ ಭಾಷಣ ಮಾಡಿದರು.
ಭಯೋತ್ಪದಕರ ವಿರುದ್ದ ಅಮೇರಿಕಾ,ಇಸ್ರೇಲ್ ನುಗ್ಗಿ ಹೊಡೆಯುತ್ತದೆ ಭಾರತಕ್ಕೆ ಏಕೆ ಸಾಧ್ಯವಿಲ್ಲ ಎಂದು ನೀವು ಪ್ರಶ್ನಿಸುತ್ತಿದ್ದೀರಿ. ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ಇದರಿಂದ ನಿಮಗೆ ಹೆಮ್ಮೆ ಆಗಿದೆ. ದೇಶದ ಹೆಸರು ಉಚ್ಛ್ರಾಯ ಸ್ಥಿತಿಗೆ ತಲುಪಿದೆ. ಆದರೆ ಇದು ಮಹಾಮಿಲಾವಟ್ ನಾಯಕರಿಗೆ ಇಷ್ಟವಿಲ್ಲ. ನೀರು ಕುಡಿದು ಬಯ್ಯುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಹೀಗೆ ಆದಾಗ ಅವರು ಗೃಹ ಸಚಿವರನ್ನು ಬದಲಾಯಿಸಿದ್ದರು. ಆದರೆ ನಿಮ್ಮ ಮೋದಿ ಹಾಗೆ ಮಾಡಲಿಲ್ಲ. ತಂತ್ರಗಾರಿಕೆ ಬದಲಾವಣೆ ಮಾಡಿದೆವು ಎಂದರು.
ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್, ಸ್ಯಾಟಲೈಟ್ ಸ್ಟ್ರೈಕ್ ಮಾಡಿದ ಬಳಿಕ ಜನತ್ತು ನಮ್ಮೊಂದಿಗಿದೆ, ಮೊದಲು ಕೇವಲ ರಷ್ಯಾ ಮಾತ್ರ ನಮ್ಮೊಂದಿಗೆ ಇತ್ತು, ಇಡೀ ಜಗತ್ತು ಪಾಕಿಸ್ತಾನದ ಪರ ಇತ್ತು. ಆದರೆ ಇಂದು ಚೈನಾ ಮಾತ್ರ ಪಾಕಿಸ್ತಾನದ ಪರ ಇದ್ದರೆ ಇಡೀ ಜಗತ್ತು ಭಾರತದ ಜೊತೆಗೆ ಇದೆ. ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ದೇಶದ, ವಿಜ್ಞಾನಿಗಳ ಬಗ್ಗೆ ಹೆಮ್ಮೆ ತರುವಂತೆ ಮಾಡಿದೆ. ಆದರೆ ಕಾಂಗ್ರೆಸ್ಗೆ ಮಾತ್ರ ಇಷ್ಟವಾಗಿಲ್ಲ. ಅವರ ಹೊಟ್ಟೆ ನೋಯುತ್ತಿದೆ. ತಾವು ಇದನ್ನು ಹಿಂದೆಯೇ ಮಾಡುತ್ತಿದ್ದೆವು. ಆದರೆ ಸೀಕ್ರೆಟ್ ಆಗಿ ಇಡಬೇಕಿತ್ತು ಎನ್ನುತ್ತಾರೆ. ಆದರೆ ಅದಕ್ಕೂ ಧೈರ್ಯ ಬೇಕು, ಆ ಧೈರ್ಯ ನಾವು ತೋರಿಸಿದ್ದೇವೆ ಎಂದರು.
ಕಾಂಗ್ರೆಸ್ ನ ಪ್ರಣಾಳಿಕೆಯಲ್ಲ, ಅದೊಂದು ಡಕೋಸ್ಲಾ ಪತ್ರ,ಕಾಂಗ್ರೆಸ್ಸಿಗರು ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ. ನಾಲ್ಕು ಪೀಳಿಗೆಯ ರಾಜ್ಯಭಾರವನ್ನು ಒಬ್ಬ ಚಾಯ್ ವಾಲ ಕಸಿದುಕೊಂಡಿದ್ದಾನೆ. ಇದು ಅವರಿಗೆ ಸರಿ ಬರುತ್ತಿಲ್ಲ ಎಂದರು.
ಕಾಂಗ್ರೆಸ್ ತಮ್ಮ ಡಕೋಸ್ಲಾ ಪತ್ರದಲ್ಲಿ ಸೇನಾ ವಿಶೇಷಾಧಿಕಾರವನ್ನು ತೆಗೆದು ಹಾಕುತ್ತಾರಂತೆ. ಇದನ್ನು ನೋಡಿದರೆ ಕೋಪ ಬರುವುದಿಲ್ಲವೇ. ಜಮ್ಮು ಕಾಶ್ಮೀರದಲ್ಲಿ ನೂರಾರು ಸೈನಿಕರು ವೀರ ಮರಣವನ್ನಪ್ಪಿದ್ದಾರೆ. ಈಗ ಸೇನೆಯನ್ನು ನಿರ್ಬಲರನ್ನಾಗಿ ಮಾಡುತ್ತಾರಂತೆ. ಪಾಕಿಸ್ತಾನಿ ಭಾಷೆ ಮಾತನಾಡುತ್ತಿದ್ದಾರೆ. ಕಾಶ್ಮೀರದಿಂದ ಸೇನೆಯನ್ನು ತೆಗೆಯುತ್ತಾರಂತೆ. ಪಂಡಿತ್ ನೆಹರು ಮಾಡಿದ ತಪ್ಪಿನಿಂದ ಈಗಲೂ ಅನುಭವಿಸುತ್ತಿದ್ದೇವೆ. ಈಗ ಸೇನೆಯನ್ನೂ ಹೊರಗಿಟ್ಟರೆ ಏನಾಗಬಹುದು. ಅವರ ಮತ್ತೊಬ್ಬ ಸಹವರ್ತಿ ದೇಶಕ್ಕೆ ಎರಡೆರಡು ಪ್ರಧಾನಿ ಮಾಡ್ತಾರಂತೆ. ಇಂತಹಾ ಕಾಂಗ್ರೆಸ್ ನಮಗೆ ಬೇಕೋ? ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಬಾಡಿಗೆ ಪಡೆದ ಕೆಲವರು ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದಾರೆ. ಇದು ದೇಶದ್ರೋಹವಲ್ಲವೇ.ಅಂತಹವರ ಪರವಾಗಿ ನಿಲ್ಲುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಕೂಡ ದೇಶದ್ರೋಹ ಮಾಡಲು ಹೊರಟಿದೆ. ಪಾಕಿಸ್ತಾನದ ಭಾಷೆಯನ್ನೇ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆಯಲ್ಲಿ ಠೇವಣಿ ಕೂಡ ಉಳಿಯಬಾರದು ಅಂತಹಾ ಶಿಕ್ಷೆ ಕೊಡಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ್ಯ ನಂತರ ಈವರೆಗೂ 70 ವರ್ಷದಿಂದ ರಾಷ್ಟ್ರೀಯ ಸೇನಾ ಸ್ಮಾರಕದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಲಿಲ್ಲ ಅವರ ಪರಿವಾರಕ್ಕೆ ಎಷ್ಟೋ ಸಮಾಧಿ, ಸ್ಮಾರಕ, ಸಂಪತ್ತು ಮಾಡಿದ್ದಾರೆ ಆದರೆ ಸೇನಾ ಸ್ಮಾರಕಮಾಡಲಿಲ್ಲ, ಇದು ವೀರ ಸೈನಿಕರಿಗೆ ಮಾಡಿದ ಅಪಮಾನವಲ್ಲವೇ? ನಾವು ದೆಹಲಿಯಲ್ಲಿ ರಾಷ್ಟ್ರೀಯ ಸೇನಾ ಸ್ಮಾರಕ ಮಾಡಿದ್ದೇವೆ. ರಾಜ್ಯದ ಜನ ದೆಹಲಿಗೆ ಭೇಟಿ ನೀಡಿದಾಗ ಸಮಯಮಾಡಿಕೊಂಡು ಭೇಟಿ ನೀಡಿ ಎಂದು ಕಾಂಗ್ರೆಸ್ ಕಾಲೆಳೆದರು.
ಕೇರಳದಲ್ಲಿ ಭಗವಾನ್ ಅಯ್ಯಪ್ಪನ ಹೆಸರು ಹೇಳಿದ್ರೆ ಜೈಲಿಗಟ್ಟುವುದಾಗಿ ಆದೇಶ ಹೊರಡಿಸಿದ್ದ ಕಾಂಗ್ರೆಸ್ಸಿಗರು ಈಗ ನನಗೆ ಸೈನಿಕರ ಹೆಸರು ಹೇಳದಂತೆ ಎಚ್ಚರಿಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ ಎಂದರು.
ಡಿಜಿಟಲ್ ಕ್ರಾಂತಿ ನಮ್ಮ ಕನಸಾಗಿತ್ತು.ಈಗ ನೂರು ಕೋಟಿ ಭಾರತೀಯರ ಕೈಯಲ್ಲಿ ಐ ಫೋನ್ ಗಳು ಬಂದಿವೆ. ಹತ್ತು ಹನ್ನೊಂದು ರೂ ಗಿಂತ ಕಡಿಮೆ ದರದಲ್ಲಿ ಒಂದು ಜಿಬಿ ಡೆಟಾ ಸಿಗುತ್ತಿದೆ. ಇದು ಮೋದಿಯ ಡಿಜಿಟಲ್ ಇಂಡಿಯಾ. ನಮ್ಮ ಬೀಮ್ ಆಪ್ ರುಪೇ ಕಾರ್ಡ್ ಸಿಂಗಪೂರ್ ನಲ್ಲೂ ಚಾಲ್ತಿಯಲ್ಲಿದೆ. ಇದು ನಮ್ಮ ಡಿಜಿಟಲ್ ಇಂಡಿಯಾ. ಅದೇ ಕಾಂಗ್ರೆಸ್ಸಿಗರದ್ದು 2ಜಿ, ತ್ರೀ ಜಿ ಸ್ಕ್ಯಾಮ್ ಕೊಡುಗೆ. 4ಜಿ ಬಗ್ಗೆ ಮಾತನಾಡುತ್ತಲೇ ಹೊರಟೇ ಹೋದರು ಎಂದು ಲೇವಡಿ ಮಾಡಿದರು.
70ವರ್ಷದಲ್ಕಿ ಕಾಂಗ್ರೆಸ್ಸಿಗರು ಈಸ್ ಆಪ್ ಲೂಟ್ ಮಾಡಿದ್ದಾರೆ. ನಾವು ಈಸ್ ಆಫ್ ಬ್ಯುಸಿನೆಸ್ ಮಾಡಿದ್ದೇವೆ. ಸ್ಟಾರ್ಟಪ್ ಬ್ಯುಸಿನೆಸ್ನಲ್ಲಿ ಬೆಂಗಳೂರು ಈಗಲೂ ನಂಬರ್ ಒನ್ ಸ್ಥಾನದಲ್ಲಿದೆ. ಯಾವ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ ಗೊತ್ತಿದೆ ತಾನೆ. ಅವರ ಮೇಲೆ ಭರವಸೆ ಇಡಲು ಸಾಧ್ಯವೇ? ಅವರು ಮಧ್ಯಮ ವರ್ಗದವರನ್ನು ಸ್ವಾರ್ಥಿಗಳು ಎಂದು ನಿಂದಿಸುತ್ತಿದ್ದಾರೆ. 70 ವರ್ಷ ನಂಬಿದಕ್ಕಾಗಿ ಕಾಂಗ್ರೆಸ್ ದೇಶವನ್ನು ಮುಳುಗಿಸಿದೆ ಎಂದು ವಾಗ್ದಾಳಿ ಮಾಡಿದರು.
ಕರ್ನಾಟಕದಲ್ಲಿ ಸಿಎಂ ಯಾರು ಎಂಬುದೇ ಅನುಮಾನ. ಒಬ್ಬರು ಸೂಪರ್ ಸಿಎಂ ಮತ್ತೊಬ್ಬರು ರಿಮೋಟ್ ಕಂಟ್ರೋಲ್ ಸಿಎಂ ಇದ್ದಾರೆ. ಟೆನ್ ಪರ್ಸೆಂಟ್ ಇದ್ದಿದ್ದು ಈಗ ಇಪ್ಪತ್ತು ಪರ್ಸೆಂಟ್ ಸರ್ಕಾರ ಆಗಿದೆ. ಇಂಕಂ ಟ್ಯಾಕ್ಸ್ ನವರು ಬಂದು ಕೇಳಿದ್ರೆ ಯಾರಾದರೂ ಉತ್ತರಿಸಲೇಬೇಕು. ನಾನು ಗುಜರಾತ್ ಸಿಎಂ ಆಗಿದ್ದಾಗ ಸಾಮಾನ್ಯ ಪೊಲೀಸರು ನನ್ನನ್ನು ಸತತ ಒಂಭತ್ತು ಗಂಟೆ ವಿಚಾರಣೆಗೆ ಒಳಪಡಿಸಿದ್ದರು.ಕಾನೂನು ಎಲ್ಲರಿಗೂ ಒಂದೆ ಸಿಎಂ ಆದರೂ ಅಷ್ಟೇ ಪಿಎಂ ಆದರೂ ಅಷ್ಟೇ. ಇಂತಹವರ ಮೇಲೆ ನಿಗಾ ಇಡಲೆಂದೇ ನಿಮ್ಮ ಈ ಚೌಕಿದಾರ್ ಇರೋದು. ಈ ಚೌಕಿದಾರನ ಮೇಲೆ ನಿಮಗೆ ನಂಬಿಕೆ ಇದೆ ತಾನೇ. ಚುನಾವಣೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಎಲ್ಲರೂ ಚೌಕಿದಾರ್ ಆಗಿ ಎಂದು ಕರೆ ನೀಡಿದರು.