ಬೆಂಗಳೂರು: ಕ್ರೇನ್ ವಾಹನದ ಬ್ರೇಕ್ ವಿಫಲವಾಗಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಸುಂಕದ ಕಟ್ಟೆ ಬಳಿ ನಡೆದಿದೆ.
ಮುನಿಯಪ್ಪ ಮೃತ ಪಾದಚಾರಿ. ಸುಂಕದಕಟ್ಟೆಯಿಂದ ಅನ್ನಪೂರ್ಣೇಶ್ವರಿ ನಗರದ ಕಡೆಗೆ ಕ್ರೇನ್ ವಾಹನ ಸಾಗುತ್ತಿತ್ತು. ಈ ವೇಳೆ ಬ್ರೇಕ್ ಕೈಕೊಟ್ಟಿದ್ದು, ವಾಹನವನ್ನು ನಿಯಂತ್ರಿಸಲು ಪರದಾಡಿದ ಚಾಲಕ ಪಾದಚಾರಿಗೆ ಗುದ್ದಿ ಮುಂದೆ ಬರುತ್ತಿದ್ದ ಆಟೋ ಹಾಗೂ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಘಾತ ಎಸಗಿದ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.