ಇಸ್ಲಾಮಾಬಾದ್: ರಕ್ತಪಿಪಾಸು ಉಗ್ರರ ರಕ್ತದಾಹಕ್ಕೆ ನಿನ್ನೆ ಭಾರತದ 40 ವೀರಯೋಧರು ಹುತಾತ್ಮರಾಗಿದ್ದಾರೆ. ಪಾಕ್ ಮೂಲದ ಜೈಷ್ ಎ ಮೊಹ್ಮದ್ ಸಂಘಟನೆಯೇ ಈ ಕೃತ್ಯ ಎಸಗಿದೆ. ಆದರೆ ಘಟನೆಗೂ ತನಗೂ ಏನೂ ಸಂಬಂಧವಿಲ್ಲ ಎನ್ನುವ ಮೂಲಕ ಪಾಕಿಸ್ತಾನ ಜಾರಿಕೊಳ್ಳುತ್ತಿದೆ.
ರಕ್ಕಸ ದಾಳಿಯ ಕುರಿತಾಗಿ ಪ್ರತಿಕ್ರಿಯಿಸಿರುವ ಪಾಕ್, ಇದೊಂದು ಗಂಭೀರವಾಗಿ ಕಾಳಜಿ ವಹಿಸಬೇಕಾದ ಸಂಗತಿ ಎಂದು ಹೇಳಿದೆ. ವಿಶ್ವದ ಎಲ್ಲೇ ಆಗಲಿ ಹಿಂಸಾಚಾರವಾಗುವುದನ್ನು ಪಾಕ್ ಖಂಡಿಸುತ್ತದೆ. ಆದರೆ ತನಿಖೆ ನಡೆಸದೆ ಘಟನೆಗೂ, ಪಾಕ್ಗೂ ಸಂಬಂಧವಿದೆ ಎಂದು ಭಾರತ ಸರ್ಕಾರ ಹಾಗೂ ಭಾರತೀಯ ಮಾಧ್ಯಮಗಳ ಹೇಳಿಕೆಗಳನ್ನು ತಾನು ತಿರಸ್ಕರಿಸುವುದಾಗಿ ಹೇಳಿದೆ.
ಇನ್ನು ಘಟನೆ ಸಂಬಂಧ ಪಾಕ್ಗೆ ಖಾರವಾಗಿ ಎಚ್ಚರಿಕೆ ನೀಡಿರುವ ಭಾರತವು, ಆ ರಾಷ್ಟ್ರ ಜೈಷ್ ಎ ಮೊಹ್ಮದ್ ಸಂಘಟನೆ ಮೂಲಕ ಉಗ್ರ ದಾಳಿ ನಡೆಸಿದೆ. ಇಸ್ಲಾಮಾಬಾದ್ ಮೊದಲು ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಹಾಗೂ ಅದರ ನೆಲದಲ್ಲಿ ಉಗ್ರರ ಸೌಕರ್ಯಗಳನ್ನು ಒಡೆದುಹಾಕಬೇಕು ಎಂದು ಹೇಳಿದೆ.
ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಭಾರಿ ಸ್ಫೋಟಕ ತುಂಬಿದ್ದ ವಾಹನವನ್ನು ಯೋಧರು ಪ್ರಯಾಣಿಸುತ್ತಿದ್ದ ಬಸ್ಗೆ ಡಿಕ್ಕಿ ಹೊಡಿಸಿದ ಪರಿಣಾಮ 44 ಯೋಧರು ಹುತಾತ್ಮರಾಗಿದ್ದರು. ಈ ರಕ್ಕಸ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ.