ಮುಂಬೈ: ಭಾರತದ ವಿರುದ್ಧ ಪಾಕಿಸ್ತಾನ ವಿಶ್ವಕಪ್ನಲ್ಲಿ ಗೆಲ್ಲಲು 'ಚಾನ್ಸೇ ಇಲ್ಲ' ಎಂದು ಟೀಂ ಇಂಡಿಯಾದ ಮಾಜಿ ಬೌಲರ್ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್ 16ರಂದು ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಪಡೆ ಪಾಕಿಸ್ತಾನವನ್ನು ಮಣಿಸಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಸ್ತುತ ಪಾಕಿಸ್ತಾನ ತಂಡಕ್ಕೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ನಾಯಕ ಸರ್ಫರಾಜ್ಗೆ ನಾಯಕತ್ವದಲ್ಲಿ ಅನುಭವ ಕಡಿಮೆ. ಹೀಗಿರುವಾಗ ಭಾರತ ತಂಡವನ್ನು ಪಾಕಿಸ್ತಾನ ಸೋಲಿಸಲು ಅವಕಾಶ ಇಲ್ಲ ಎಂದು ಮಾಜಿ ಸ್ಪಿನ್ನರ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ವಿರುದ್ಧ ಪ್ರಸ್ತುತ ಇರುವ ಪಾಕಿಸ್ತಾನ ತಂಡ 10 ಪಂದ್ಯವಾಡಿದರೆ 9 ಪಂದ್ಯಗಳಲ್ಲಿ ಸೋಲನುಭವಿಸಲಿದೆ ಎಂದ ಭಜ್ಜಿ, 1992 ರಿಂದ 2015ರವರೆಗೆ ಪಾಕಿಸ್ತಾನ ಬಲಿಷ್ಠವಾಗಿತ್ತು. ಆಗಲೇ ಭಾರತವನ್ನು ಸೋಲಿಸಲಾಗಲಿಲ್ಲ. ಕಳಪೆ ಫಾರ್ಮ್ನಲ್ಲಿರುವ ಪ್ರಸ್ತುತ ತಂಡ ಕೊಹ್ಲಿ ಪಡೆಯನ್ನು ಮಣಿಸಲು ಅಸಾಧ್ಯ ಎಂದು ಭಜ್ಜಿ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಬೇರೆ ಪಂದ್ಯಗಳಲ್ಲಿ ಸೋಲಲು ಕಾರಣ ನನಗೆ ತಿಳಿದಿದೆ. ಆದರೆ ವಿಶ್ವಕಪ್ನಲ್ಲಿ ಏನಾಗಿದೆ ಎಂಬುದು ಅವರಿಗೂ ತಿಳಿದಿದೆ. ಒಂದು ವೇಳೆ ಭಾರತ ವಿರುದ್ಧ ಪಾಕ್ ಗೆದ್ದರೆ ಅವರಿಗೆ ಅದೇ ಬೋನಸ್, ನಮಗೆ ದೊಡ್ಡ ಹೊಡೆತ ಎಂದು ಹರ್ಭಜನ್ ಅಭಿಪ್ರಾಯ ಪಟ್ಟಿದ್ದಾರೆ. ಪಾಕಿಸ್ತಾನ 1992ರಿಂದ 2015ರವರೆಗೆ ಒಟ್ಟು 6 ಪಂದ್ಯಗಳನ್ನಾಡಿದೆ. 6ರಲ್ಲೂ ಭಾರತ ತಂಡವೇ ಜಯಿಸಿದೆ. ವಿಶೇಷವೆಂದರೆ 1992ರ ವಿಶ್ವಕಪ್ ಗೆದ್ದಿದ್ದ ಪಾಕಿಸ್ತಾನ ಭಾರತದ ವಿರುದ್ಧ ಲೀಗ್ ಪಂದ್ಯದಲ್ಲಿ ಸೋಲನುಭವಿಸಿತ್ತು.