ಇಸ್ಲಾಮಾಬಾದ್: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಿಂದ ಜಾಗತಿಕ ಉಗ್ರನ ಪಟ್ಟ ಕಟ್ಟಿಕೊಂಡಿರುವ ಜೈಷ್- ಇ- ಮೊಹ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ ಮೇಲೆ ಇದೀಗ ಪಾಕ್ ಕೂಡ ನಿರ್ಬಂಧ ಹೇರಿದೆ.
ವಿಶ್ವಸಂಸ್ಥೆಯಲ್ಲಿ ಆತ ಜಾಗತಿಕ ಉಗ್ರ ಎಂಬ ಹಣೆಪಟ್ಟಿಕಟ್ಟಿಕೊಳ್ಳುತ್ತಿದ್ದಂತೆ ಕ್ರಮ ಕೈಗೊಂಡಿರುವ ಪಾಕಿಸ್ತಾನ, ಆತನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಜತೆಗೆ ಆತನ ವಿದೇಶಿ ಪ್ರವಾಸದ ಮೇಲೆ ನಿರ್ಬಂಧ ಹೇರಿದೆ.
2001 ಸಂಸತ್ ಮೇಲಿನ ದಾಳಿ, 2008ರ ಮುಂಬೈ ಟೆರರ್ ಅಟ್ಯಾಕ್, 2016ರ ಪಠಾಣ್ಕೋಟ್ ದಾಳಿ ಹಾಗೂ 2019ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ಗೆ ಜಾಗತಿಕ ಉಗ್ರನ ಪಟ್ಟಕಟ್ಟಬೇಕೆಂದು ಕಳೆದ 10 ವರ್ಷಗಳಿಂದ ಭಾರತ ಹೋರಾಟ ನಡೆಸುತ್ತಿತ್ತು. ಅದಕ್ಕೆ ಚೀನಾ ಮೇಲಿಂದ ಮೇಲೆ ಅಡ್ಡಗಾಲು ಹಾಕಿತ್ತು. ಆದರೆ ವಿಟೋ ರಾಷ್ಟ್ರಗಳು ಚೀನಾ ಮೇಲೆ ಒತ್ತಡ ಹೇರಿದ್ದರಿಂದ ಅದು ತನ್ನ ಆಕ್ಷೇಪ ಹಿಂಪಡೆದುಕೊಂಡಿತ್ತು. ಇದರಿಂದಾಗಿ ಆತನಿಗೆ ಜಾಗತಿಕ ಉಗ್ರನ ಪಟ್ಟ ಕಟ್ಟಲಾಗಿತ್ತು.
ಇದೀಗ ಪಾಕ್ ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ಆತನ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.