ಭುವನೇಶ್ವರ(ಒಡಿಶಾ) : ರಾಜಧಾನಿ ಅಂಧಾರೂವಾದಲ್ಲಿ ಲಸಿಕೆ ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭವಾಗಿದೆ. 2022ರ ಜೂನ್ ವೇಳೆಗೆ ಕೋವಾಕ್ಸಿನ್ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿ ನಿಗದಿಪಡಿಸಲಾಗಿದೆ.
ಗುರುವಾರ ಇಲ್ಲಿ ನಡೆದ ರಾಜ್ಯಮಟ್ಟದ ಬಯೋಟೆಕ್ ಅನುಷ್ಠಾನ ಸಮಿತಿ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಸುರೇಶ್ ಚಂದ್ರ ಮಹಾಪಾತ್ರ ಅವರು ಲಸಿಕೆ ಉತ್ಪಾದನಾ ಗುರಿ ದಿನಾಂಕವನ್ನು ಪೂರೈಸಲು ನಿರ್ಮಾಣ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಮೂಲಕ ಸ್ಥಾಪಿಸಲಾಗುತ್ತಿರುವ ಅಂಧರುವಾ ಆಂಕರ್ ಲಸಿಕೆ ಘಟಕವು ಕೊರೊನಾ ಮತ್ತು ಮಲೇರಿಯಾ ಸೇರಿದಂತೆ ಸುಮಾರು 10 ಬಗೆಯ ಸುಧಾರಿತ ಲಸಿಕೆಗಳನ್ನು ಉತ್ಪಾದಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಐಡಿಸಿಒ(ಒಡಿಶಾ ಇಂಡಸ್ಟ್ರೀಯಲ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಕಂಪನಿ) ಸುಗಮ ಭೂ ಹಂಚಿಕೆ ಪ್ರಕ್ರಿಯೆ ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಸುಧಾರಣೆಗಳು ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಹಾಯ ಮಾಡಿವೆ. ಘಟಕವನ್ನು ಸ್ಥಾಪಿಸಲು ಶಾಸನಬದ್ಧ ಅನುಮತಿಗಳನ್ನು ಸಹ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದರು.
ಐಡಿಸಿಒ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಸಿಂಗ್ ಮಾತನಾಡಿ, ಭುವನೇಶ್ವರ ಇನ್ಫೋಸಿಟಿ ಬಳಿ ಅತ್ಯಾಧುನಿಕ ಆರ್ಟ್-ಒ-ಹಬ್ ಇನ್ಕ್ಯುಬೇಷನ್ ಸೆಂಟರ್ ಬಂದಿದ್ದು, ಸುಮಾರು 28 ಸಾವಿರ ಚದರ ಅಡಿ ಜಾಗವನ್ನು ಹೊಂದಿರುವ ಎರಡು ಮಹಡಿಗಳನ್ನು ಇನ್ಕ್ಯೂಬೇಶನ್ ಸೌಲಭ್ಯಕ್ಕಾಗಿ ಲಭ್ಯವಾಗುವಂತೆ ಮಾಡಬಹುದು ಎಂದರು.
ಈ ನಿರ್ಧಾರವು ಒಡಿಶಾದಲ್ಲಿ ಸುಮಾರು 775 ಸ್ಟಾರ್ಟ್ಅಪ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ. ಅವರಲ್ಲಿ ಸುಮಾರು 65 ಮಂದಿ ಪೇಟೆಂಟ್, ಟ್ರೇಡ್ ಮಾರ್ಕ್ ಮತ್ತು ಕಾಪಿ ರೈಟ್ ಪಡೆದಿದ್ದಾರೆ. ಸುಮಾರು 75 ಸ್ಟಾರ್ಟ್ಅಪ್‌ಗಳು ಬಯೋಟೆಕ್ ಮತ್ತು ಆರೋಗ್ಯ ಕ್ಷೇತ್ರದಲ್ಲಿವೆ ಎಂದು ಸಿಂಗ್ ಹೇಳಿದರು.