ರಾಮನಗರ: ಕೊರೊನಾ ಸಂಕಷ್ಟದಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಆಶಾ ಕಾರ್ಯಕರ್ತರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿದ್ದಾರೆ.
ರಾಮನಗರದ ಡಿಹೆಚ್ಒ ಕಚೇರಿಯ ಮುಂಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಫ್ ನರ್ಸ್ಗಳಿಗೆ ಆರ್ಥಿಕ ನೆರವು ನೀಡಲಾಯಿತು. ಇದರ ಜೊತೆಗೆ ನೆಬುಲೈಝರ್ ಮಿಷನ್ ಕೂಡ ವಿತರಿಸಲಾಯಿತು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ನಿಖಿಲ್, ರಾಜ್ಯದಲ್ಲಿ ಎರಡನೇ ಕೊರೊನಾ ಅಲೆ ತೀವ್ರವಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್ ತಮ್ಮ ಪ್ರಾಣ ಪಣಕ್ಕಿಟ್ಟು ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿದ್ದಾರೆ. ಎಲ್ಲಾ ಕೋವಿಡ್ ವಾರಿಯರ್ಸ್ ನಿಜವಾದ ಹೀರೋಗಳು. ನಿಮಗೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಭಾವಿಸಿದ್ದೆ ಎಂದರು.
ಈಗಾಗಲೇ 16 ಆಶಾ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರತಿ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಹೇಳಿದೆ. ಆದರೆ ಇಲ್ಲಿಯವರೆಗೆ ಒಂದು ಕುಟುಂಬಕ್ಕೆ ಮಾತ್ರ ಹಣ ಸಿಕ್ಕಿದೆ ಎಂಬುದು ತಿಳಿಯಿತು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡ್ತೀವಿ ಅಂದಿದ್ದರು. ಆದರಲ್ಲೂ ಸರ್ಕಾರ ವಿಫಲವಾಗಿದೆ. ತಮ್ಮ ಪ್ರಾಣ ಪಣಕ್ಕಿಟ್ಟು, ನಮ್ಮ ಪ್ರಾಣ ಉಳಿಸುವ ಕೆಲಸವನ್ನ ಕೊರೊನಾ ವಾರಿಯರ್ಸ್ ಮಾಡ್ತಿದಾರೆ. ಅವರನ್ನ, ಅವರ ಕುಟುಂಬವನ್ನ ಉಳಿಸುವ ಕೆಲಸ ನಾವು ಮಾಡ್ಬೇಕು ಎಂದರು.
ಹಾಗೆಯೇ ನಮ್ಮ ಪಕ್ಷದ ಕಡೆಯಿಂದ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದೇವೆ. ನೆಬುಲೈಝರ್ ಮಿಷನ್ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಕಿಟ್ ವಿತರಣೆ ಮಾಡುತ್ತೇವೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ರಾಮನಗರ ಹಾಗೂ ಚನ್ನಪಟ್ಟಣ ಎರಡು ಕಣ್ಣುಗಳಿದ್ದಂತೆ. ಚನ್ನಪಟ್ಟಣದಲ್ಲೂ ಕೂಡ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.