ಹೈದರಾಬಾದ್: ವೈವಾಹಿಕ ಜೀವನ ಮುಗಿದ ಅಧ್ಯಾಯ, ಆ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ ಬಿಗ್‌ಬಾಸ್ ಸ್ಪರ್ಧಿ ನಿಧಿ ಸುಬ್ಬಯ್ಯ. ಇಂದು ಫೇಸ್ಬುಕ್ ಲೈವ್ ಬಂದು ಮಾತನಾಡಿದ ಅವರು, ವೀಕ್ಷಕರೊಬ್ಬರು, ನೀವು ಬಿಗ್‌ಬಾಸ್ ಮನೆಯಲ್ಲಿ ನಿಮ್ಮ ವೈಯಕ್ತಿಕ ವಿಷಯ ಹಂಚಿಕೊಳ್ಳಲಿಲ್ಲ ಯಾಕೆ ಎಂದು ಪ್ರಶ್ನೆಯನ್ನಿಟ್ಟರು.
ಅದಕ್ಕೆ ನಿಧಿ ಸುಬ್ಬಯ್ಯ, ಕೇವಲ ಹತ್ತು ತಿಂಗಳು ಮಾತ್ರ ಅದಾಗಿತ್ತು. ನಾನು ಏನೇ ಹೇಳಿದರು ಅದು ಒಂದು ಕಡೆಯದ್ದಾಗಿರುತ್ತದೆ. ಆ ವ್ಯಕ್ತಿ ಇಲ್ಲದಾಗ ಹಿಂದೆ ಹೇಳುವುದು ಸರಿಯಲ್ಲ. ಈ ಬಗ್ಗೆ ನನ್ನ ತಾಯಿ ಬಳಿಯೂ ಹೇಳಿಕೊಂಡಿಲ್ಲ. ಹಲವು ಬಾರಿ ಕೇಳಿದ್ದಾರೆ ಏನಾದರೂ ಹೇಳಬೇಕಿದ್ದರೆ ಹೇಳು ಅಂತಾ. ಆದರೆ, ಆಗಿದ್ದು ಆಯ್ತು ಅದನ್ನು ಅಲ್ಲಿಗೇ ಬಿಟ್ಟು ಮುಂದಕ್ಕೆ ಹೋಗಬೇಕು ಎನ್ನುವುದು ನನ್ನ ನಂಬಿಕೆ ಎಂದರು.
ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ನನ್ನ ತಾಯಿಗೆ ಕರೆ ಮಾಡಿ ನನಗಿಷ್ಟವಾದ ತಿಂಡಿಗಳನ್ನು ಮಾಡುವಂತೆ ಹೇಳಿದೆ. ಚಿಕನ್ ಕರಿ ಹಾಗೂ ಕೊಡಗಿನ ಖಾದ್ಯವನ್ನು ಮಾಡಿದ್ದರು, ಚೆನ್ನಾಗಿ ತಿಂದೆ. ಸುಮಾರು 72 ದಿನಗಳ ಕಾಲ ಮೊಬೈಲ್ ಇಲ್ಲದೆ ಇರುವುದು ಒಂದು ಸಾಧನೆ ಎನ್ನಬಹುದು. ಪ್ರತಿ ಎರಡು ನಿಮಿಷಕ್ಕೊಮ್ಮೆ ಹೊಸ ವಿಷಯ ಬಂದಿರುತ್ತದೆ. ಅದನ್ನು ನೋಡುತ್ತಿರುತ್ತೇವೆ. ಆದರೆ, ಅಲ್ಲಿ ನಾವು ಒಬ್ಬರಿಗೊಬ್ಬರು ಕನೆಕ್ಟ್ ಆಗಿದ್ದೆವು. ಇದೀಗ ನಾನು ಪ್ರತಿಯೊಬ್ಬರನ್ನು ಆ ಮನೆಯಲ್ಲಿ ಮಿಸ್ ಮಾಡಿಕೊಳ್ಳುತ್ತೇನೆ. ಯಾವಾಗಲೂ ನಗುತ್ತಲೇ ಇರ್ತಿದ್ದೆ, ಈಗಲೂ ಅಷ್ಟೇ ನಗುತ್ತಿರಲು ಪ್ರಯತ್ನಪಡುತ್ತೇನೆ ಎಂದರು.
ನಾವೆಲ್ಲಾ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಆಗಾಗ ಮಾತನಾಡುತ್ತಲೇ ಇರುತ್ತೇವೆ. ಅಡುಗೆ ಶೋ ಮಾಡಲು ನಾನು ಮತ್ತು ಶುಭ ಯುಟ್ಯೂಬ್ ಚಾನೆಲ್ ಶುರು ಮಾಡಲಿದ್ದೇವೆ ಎಂದರು.
ನೀವು ತುಂಬಾ ಚೆನ್ನಾಗಿ ಹಾಡುತ್ತೀರ ಎಂದಾಗ, ನನ್ನ ಇಷ್ಟವಾದ 'ಸಾಲುತಿಲ್ಲವೇ.. ಸಾಲುತ್ತಿಲ್ಲವೇ'... ಹಾಡನ್ನು ಹಾಡಿ ಸುದೀಪ್ ಅವರಿಗೆ ಅರ್ಪಿಸಿದರು. ಯಾವಾಗಲೂ ಒಂದೇ ಕಲರ್ ಬಟ್ಟೆಯಲ್ಲಿ ಇರುತ್ತಿದ್ದೆ. ನನಗೆ ಗ್ರೇ ಅಂಡ್ ಬ್ಲ್ಯಾಕ್ ಕಲರ್ ಇಷ್ಟ. ಮನೆಯಲ್ಲೂ ಅದೇ ಕಲರ್ಸ್ ಜಾಸ್ತಿ ಇದೆ ಎಂದರು.
ಇದನ್ನೂ ಓದಿ: ಬಿಗ್‌ಬಾಸ್ ಟ್ರೋಫಿಗಿಂತ ಒಲವಿನ ಗೆಳೆಯನನ್ನು ಪಡೆದಿದ್ದೇನೆ: ದಿವ್ಯಾ ಉರುಡುಗ