ಮೈನಪುರಿ(ಯುಪಿ): ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಬರೋಬ್ಬರಿ 24 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಇಂದು ಮೈನಪುರಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪರವಾಗಿ ಮತಯಾಚನೆ ನಡೆಸಿ, ಬೃಹತ್ ರ್ಯಾಲಿಯಲ್ಲಿ ಭಾಗಿಯಾದರು. ಈ ಮೂಲಕ ಬಿಎಸ್ಪಿ-ಎಸ್ಪಿ ಮೈತ್ರಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಉತ್ತರಪ್ರದೇಶದ ಮೈನಪುರಿ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್ ಸ್ಪರ್ಧೆ ಮಾಡಿದ್ದು, ಅವರ ಪರವಾಗಿ ಮಾಯಾವತಿ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಮುಲಾಯಂ ಸಿಂಗ್ ಇವತ್ತು ನಮ್ಮೊಂದಿಗೆ ಮಾಯಾವತಿ ಇದ್ದಾರೆ. ಅವರಿಗೆ ನಾವು ಹೆಚ್ಚಿನ ಗೌರವ ನೀಡುತ್ತೇವೆ. ಅವರು ಯಾವಾಗಲೂ ನಮಗೆ ಸಾಥ್ ನೀಡಿದ್ದಾರೆ ಎಂದು ಹೇಳಿದ್ದರು.
ನರೇಂದ್ರ ಮೋದಿ ಸೋಲಿಸುವ ಉದ್ದೇಶದಿಂದ ನಾವು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅವರ ಹಾಗೇ ಕೇವಲ ನಾವು ಸುಳ್ಳು ಹೇಳುವ ಮನುಷ್ಯರಲ್ಲ ಎಂದು ಗುಡುಗಿದರು.
24 ವರ್ಷಗಳ ಹಿಂದೆ ಅಂದರೆ 1995ರಲ್ಲಿ ಮೈತ್ರಿ ಮಾಡಿಕೊಂಡಿದ್ದ ಈ ಎರಡು ಪಕ್ಷಗಳ ನಡುವೆ ವೈಮನಸ್ಸು ಉಂಟಾಗಿತ್ತು. ಎಸ್ಪಿಗೆ ನೀಡಿದ್ದ ಬೆಂಬಲವನ್ನ ಮಾಯಾವತಿ ವಾಪಸ್ ಪಡೆದಿದ್ದರು. ಇದರಿಂದ ರೊಚ್ಚಿಗೆದ್ದ ಎಸ್ಪಿ ಕಾರ್ಯಕರ್ತರು ಮಾಯಾವತಿಯ ವಿಧಾಸಭೆಯಲ್ಲಿದ್ದ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದ್ದರು. ಅದಾದ ಬಳಿಕ ಇವರು ಮೈತ್ರಿ ಕೂಡ ಮುರಿದು ಬಿದ್ದಿತು. ಆ ಬಳಿಕ ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿರಲಿಲ್ಲ.