ಬೆಂಗಳೂರು/ಬಳ್ಳಾರಿ: ವಾಡಿಕೆಗಿಂತ ಮುನ್ನವೇ ರಾಜ್ಯಕ್ಕೆ ನೈರುತ್ಯ ಮಾರುತಗಳು ಆಗಮಿಸಿದ್ದು, ಮುಂಗಾರು ಆರಂಭವಾಗಿದೆ. ಕೇರಳಕ್ಕೆ ನಿನ್ನೆ (ಜೂನ್ 3) ಮುಂಗಾರು ಪ್ರವೇಶವಾದ ಮರುದಿನವೇ ರಾಜ್ಯಕ್ಕೂ ಪ್ರವೇಶವಾಗಿದೆ.
ದಾವಣೆಗೆರೆ, ಚಿತ್ರದುರ್ಗ, ಶಿವಮೊಗ್ಗದವರೆಗೂ ವ್ಯಾಪಿಸಿದ್ದು, ಮುಂದಿನ ಎರಡು ಮೂರು ದಿನದಲ್ಲಿ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಮತ್ತು ನಾಳೆ ವ್ಯಾಪಕ ಮಳೆಯಾಗಲಿದೆ. ಭಾರೀ ಮಳೆಯಾಗುವ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ನಂತರ ಮುಂಗಾರು ಕ್ಷೀಣಿಸಬಹುದು ಎಂದು ಅಂದಾಜಿಸಲಾಗಿದೆ. ಬೇಗ ಮುಂಗಾರು ಬಂದಿದ್ರೂ, ಬೇಗ ಕ್ಷೀಣಿಸಬಹುದು. ಜೂನ್ 6ರಿಂದ ಮಳೆ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ.ಎಸ್ ಪಾಟೀಲ್ ತಿಳಿಸಿದರು. ನಂತರ ಒಂದು ವಾರದ ಬಳಿಕ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಈ ವರ್ಷ ವಾಡಿಕೆಯಷ್ಟು ಮಳೆಯಾಗಬಹುದು ಎಂದರು.

ಮುಂಗಾರು ಮಾರುತವು ಕರ್ನಾಟಕ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗಕ್ಕೆ ಮುಂದಿನ ಎರಡು ದಿನಗಳಲ್ಲಿ ಪ್ರವೇಶಿಸಲಿದೆಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕವು ತಿಳಿಸಿದೆ.
ಗಾಳಿಯ ಒತ್ತಡದಲ್ಲಿ ವ್ಯತ್ಯಾಸ ಆಗಿರೋದರಿಂದಲೇ ಜೂನ್ 3 ಮತ್ತು 4 ರಂದು ಉತ್ತರ ಕರ್ನಾಟಕ ಭಾಗದ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದ್ದು, ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ಹವಾಮಾನ ಘಟಕವು ತಿಳಿಸಿದೆ.
ಬೆಂಗಳೂರಲ್ಲಿ ಭಾರೀ ಮಳೆ:
ರಾಜಧಾನಿಯಲ್ಲಿ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ನಗರದಾದ್ಯಂತ ಎಂದಿನಂತೆ ಮಧ್ಯಾಹ್ನ ಸುಮಾರು 3 ಗಂಟೆಯಿಂದ ಮಳೆ ಪ್ರಾರಂಭವಾಗಿ ವಸಂತನಗರ, ರಾಜಾಜಿನಗರ, ಮಲೇಶ್ವರಂ ಬಡಾವಣೆಗಳು ಜಲವೃತಗೊಂಡಿವೆ.