ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕು ಬೂದಿಕೋಟೆ ಗ್ರಾಮದ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಿತು. ಇದರ ಅಂಗವಾಗಿ ನಡೆದ ಸಾಮ್ರಾಟ್ ಸುಯೋಧನ ಅನ್ನೋ ತೆಲುಗು ಪೌರಾಣಿಕ ನಾಟಕದಲ್ಲಿ ಜನಪ್ರತಿನಿಧಿಗಳು ಬಣ್ಣಹಚ್ಚಿದ್ದು ವಿಶೇಷವಾಗಿತ್ತು.
ಬಂಗಾರಪೇಟೆ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಎನ್. ನಾರಾಯಣಸ್ವಾಮಿ ಸೇರಿದಂತೆ, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಪಕ್ಷಾತೀತವಾಗಿ ಒಂದೆಡೆ ಸೇರಿ ನಾಟಕ ಅಭ್ಯಾಸ ಮಾಡಿದರು. ಅದೆಲ್ಲದರ ಪರಿಣಾಮ ಶಾಸಕ ನಾರಾಯಣಸ್ವಾಮಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಹಾಗೂ ಇತರ ಜನಪ್ರತಿನಿಧಿಗಳು ವಿವಿಧ ವೇಷಗಳಲ್ಲಿ ಮಿಂಚಿದ್ರು.
ಇದೇ ವೇಳೆ ಮಾತನಾಡಿದ ಶಾಸಕರು, ಇದೊಂದು ಹೊಸ ಅನುಭವ. ಜೊತೆಗೆ ಸದಾ ಅಧಿಕಾರ, ರಾಜಕೀಯ ಜಂಜಾಟದಲ್ಲಿರುವ ನಮಗೆ ಒಳ್ಳೆಯ ಮನರಂಜನೆ ನೀಡಿದೆ ಅಂದ್ರು.
ಸದಾ ರಾಜಕೀಯ ವೇದಿಕೆಗಳಲ್ಲಿ ಕಾಣಿಸಕೊಳ್ಳುವ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ಜನರಿಗಾಗಿ ಮನರಂಜನೆ ನೀಡಲು ಬಣ್ಣ ಹಚ್ಚಿ, ಪೌರಾಣಿಕ ನಾಟಕದ ಪಾತ್ರ ಮಾಡಲು ಮುಂದಾಗಿದ್ದನ್ನ ಮೆಚ್ಚಲೇಬೇಕು. ಶಾಸಕರ ಬೆಂಬಲಿಗರಿಗೆ ಹಾಗೂ ಕ್ಷೇತ್ರದ ಜನರಿಗೆ ಇವರೆಲ್ಲಾ ಮತ್ತಷ್ಟು ಹತ್ತಿರವಾಗುವ ಜೊತೆಗೆ ರಾಜಕೀಯ ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಜನರ ಮನಸ್ಸು ಗೆಲ್ಲಲು ಪ್ರಯತ್ನಿಸಿದ್ರು.