ಮೈಸೂರು: ಮೈಸೂರಿನಲ್ಲಿ ನಡೆದ ವಿದ್ಯಮಾನಗಳ ಪರಿಶೀಲನೆ ನಡೆಸಿದ ಮುಖ್ಯ ಕಾರ್ಯದರ್ಶಿಗಳು ಅದರಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಆ ಹಿನ್ನೆಲೆ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಮಾಡಲಾಗಿದೆ ಹೊರತು ಯಾರದೋ ಒತ್ತಡದಿಂದಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಅವರು ಕೊಟ್ಟ ವರದಿಯ ಹಿನ್ನೆಲೆ ವರ್ಗಾವಣೆ ಮಾಡಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ಮುಖ್ಯ ಕಾರ್ಯದರ್ಶಿಗಳು ಸರ್ಕಾರಕ್ಕೆ ವರದಿ ಕೊಟ್ಟಿದ್ದು, ಈ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡಲಾಯಿತು ಎಂದಿದ್ದಾರೆ.
ಇದಕ್ಕೆ ಬೇರೆ ಕಾರಣ ಅಥವಾ ಯಾರದೋ ಒತ್ತಡ ಇರಲಿಲ್ಲ. ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೂ ಅಕ್ರಮಗಳ ಬಗ್ಗೆ ಕೆಲವು ಆದೇಶಗಳನ್ನು ಮಾಡಿದ್ದು, ಇದರ ಬಗ್ಗೆ ನೂತನ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆಯನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರಿನಲ್ಲಿ ಲಾಕ್‌ಡೌನ್ ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ತೀರ್ಮಾನದ ಬಗ್ಗೆ ಸಂಜೆ ಮೈಸೂರಿನಲ್ಲಿ ಇಲ್ಲಿನ ಶಾಸಕರ ಸಭೆ ನಡೆಸಿ ಚರ್ಚೆಮಾಡಿ ಈ ಬಗ್ಗೆ ಮಾಹಿತಿ ಕೊಡುತ್ತೇವೆ. ನಂತರ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.