ಭಟ್ಕಳ: ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆಗೆ ಜನರು ಮುಂದೆ ಬರುತ್ತಿಲ್ಲ ಎಂಬ ದೂರುಗಳಿವೆ. ಆದ್ದರಿಂದ ವೈದ್ಯರ ತಂಡವನ್ನೇ ಹಳ್ಳಿಗಳಿಗೆ ಕಳುಹಿಸುವ ವೈದ್ಯರ ನಡೆ ಹಳ್ಳಿಯ ಕಡೆ ಪರಿಕಲ್ಪನೆಯನ್ನು ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಓದಿ: ಕಾಂಗ್ರೆಸ್ನಿಂದ ಭಾರತಕ್ಕೆ ಅಪಮಾನ: ಪ್ರಹ್ಲಾದ್ ಜೋಶಿ
ತೌಕ್ತೆ ಚಂಡಮಾರುತದಿಂದ ಭಟ್ಕಳ ತಾಲೂಕಿನಲ್ಲಿ ಆಗಿರುವ ಹಾನಿಯನ್ನು ಮಂಗಳವಾರ ಪರಿಶೀಲಿಸಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ವೈದ್ಯರ ತಂಡವನ್ನು ಬಸ್‌ಗಳಲ್ಲಿ ಗ್ರಾಮಗಳಿಗೆ ಕಳುಹಿಸಲಾಗುತ್ತದೆ. ಇದರಿಂದ ಕೋವಿಡ್‌ನೊಂದಿಗೆ ಇತರ ಕಾಯಿಲೆಗಳಿಗೂ ಚಿಕಿತ್ಸೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಲಾಕ್‌ಡೌನ್ ಎಷ್ಟು ದಿನ ಮುಂದುವರಿಯುತ್ತದೆ ಎಂದು ನಿರ್ಧಾರವಾಗದೇ ಹಣಕಾಸು ನೆರವಿನ ಯಾವುದೇ ಪ‍್ಯಾಕೇಜ್ ಘೋಷಿಸುವುದಿಲ್ಲ. ಲಾಕ್‌ಡೌನ್ ಮಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯ ಎಂಬುದು ಮಹಾರಾಷ್ಟ್ರದಲ್ಲಿ ಸಾಭೀತಾಗಿದೆ. ಹಾಗಾಗಿ ಈ ಕ್ರಮ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದರು.
ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಟ್ವಿಟರ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಲಸಿಕೆಗಾಗಿ 100 ಕೋಟಿ ರೂ. ಕೊಡುವುದಾಗಿ ಕಾಂಗ್ರೆಸ್ ಹೇಳಿದೆ. ಅದು ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ವಿವಿಧ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ನೀತಿ ನಿಯಮಗಳ ಮೇಲೆ ಕೊಟ್ಟಿರುವ ಹಣವನ್ನು ಪುನಃ ಕೊಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.