ಬೆಂಗಳೂರು : ಬಿಯು ನಂಬರ್ ಇದ್ದರೂ ಬೆಡ್ ನೀಡದಿದ್ದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಂತಹ ಆಸ್ಪತ್ರೆಗಳ ಹೊರ ರೋಗಿ ಸೇವೆಯನ್ನು ಬಂದ್ ಮಾಡಿಸುತ್ತೇವೆ ಎಂದು ಬೆಡ್ ಹಂಚಿಕೆ ಕುರಿತು ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಆರ್.ಆರ್.ನಗರ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿ.ಯು ನಂಬರ್ ಇದ್ದರೂ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ನೀಡದಿರುವುದು ಗಮನಕ್ಕೆ ಬಂದಿದೆ.
ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇನೆ. ಎಷ್ಟೇ ದೊಡ್ಡ ಆಸ್ಪತ್ರೆ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ. ಮುಲಾಜಿಲ್ಲದೆ ಒಪಿಡಿ ಬಂದ್ ಮಾಡುತ್ತೇವೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು.
ತುರ್ತುಸೇವೆ ಒದಗಿಸುವ ಕಂಪನಿಗಳು ಮಾತ್ರ ಕಾರ್ಯ ನಿರ್ವಹಣೆ ಮಾಡಬೇಕು. ಪಿಪಿಇ ಕಿಟ್, ಆಸ್ಪತ್ರೆಗಳಿಗೆ ಬಟ್ಟೆ ನೀಡುತ್ತಾರೆ. ಅಂತಹ ಕಂಪನಿಗಳು ಮಾತ್ರ ಕಾರ್ಯ ನಿರ್ವಹಣೆ ಮಾಡಬೇಕು.
ಬೇರೆ ಯಾರು ನಾಳೆಯಿಂದ ಕಂಪನಿ, ಕೈಗಾರಿಕೆ ತೆರೆಯಲು ಬಿಡಲ್ಲ. ಹಾಗೇನಾದರೂ ನಿಯಮ ಉಲ್ಲಂಘನೆ ಮಾಡಿ ಕಂಪನಿ ತೆರೆಯುವ ಕೆಲಸ ಮಾಡಿದರೆ ಅಂತಹ ಕೈಗಾರಿಕೆ ಮುಚ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಚಾಮರಾಜನಗರ ವಿಚಾರ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ಇದೆ. ಆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಆದರೆ, ಅಲ್ಲಿ ಯಾವ ಅಧಿಕಾರಿ ತಪ್ಪು ಮಾಡಿದ್ದಾರೆ ಅವರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇವೆ.
ಸರ್ಕಾರ ಯಾವುದಕ್ಕೂ ಹಿಂಜರಿಯುವುದಿಲ್ಲ. ನಮಗೆ ಜನರ ಪ್ರಾಣ ರಕ್ಷಣೆ ಮುಖ್ಯ. ಯಾವುದೇ ಅಧಿಕಾರಿಗಳ ರಕ್ಷಣೆ ಮುಖ್ಯ ಅಲ್ಲ ಎಂದರು.
ನಂತರ ಮಾತನಾಡಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸರ್ಕಾರ ಲಾಕ್ಡೌನ್ ಹೇರಿದೆ. ಯಾವುದು ತುರ್ತುಸೇವೆ ಅಡಿಯಲ್ಲಿ ಬರಲಿದೆಯೋ ಅವರಿಗೆ ಬಿಟ್ಟು ಬೇರೆಯವರಿಗೆ ವಾರ್ನ್ ಮಾಡುತ್ತಿದ್ದಾರೆ. ಸಾರ್ವಜನಿಕರು ಸುಮ್ಮನೆ ಆಚೆ ಬರದಿದ್ದರೆ ಲಾಠಿ ಬೀಸುವ ಪ್ರಶ್ನೆ ಇಲ್ಲ.
ನೂರಕ್ಕೆ ನೂರು ಜನ ಸಹಕಾರ ಕೊಡಬೇಕು. ತುರ್ತು ಸೇವೆ ವ್ಯಾಪ್ತಿಯಲ್ಲಿ ಇಲ್ಲದವರು ಯಾರು ಹೊರಗಡೆ ಬರಬಾರದು ಎಂದರು. ಮೈಸೂರು ಕೆ ಆರ್ ಆಸ್ಪತ್ರೆ ಬೆಡ್, ಮೆಡಿಸಿನ್, ಔಷಧ ನೀಡದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಸಂಸದ ಪ್ರತಾಪ್ ಸಿಂಹ ಟಾಸ್ಕ್ ಫೋರ್ಸ್ನಲ್ಲಿದ್ದಾರೆ.
ಅವರು ಎಲ್ಲವನ್ನು ಗಮನಿಸುತ್ತಿದ್ದಾರೆ, ಪೊಲೀಸ್ ಮಫ್ತಿನಲ್ಲಿ ಹುಡುಕುತ್ತಾರೆ. ನಾನು ನಾಳೆ ಮೈಸೂರಿಗೆ ಹತ್ತು ಗಂಟೆಗೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದರು.
ಚಾಮರಾಜನಗರದಲ್ಲಿ ಸಚಿವರು ವಾಸ್ತವ್ಯ ಮಾಡುತ್ತಿದ್ದಾರೆ. ಏನೇ ಮಿಸ್ ಕಮ್ಯುನಿಕೇಶನ್ಸ್ ಆದರೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅದನ್ನು ಗಮನಿಸಬೇಕು. ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ, ಸತ್ಯಾಂಶ ಹೊರಗೆ ಬರುತ್ತದೆ ಎಂದರು.