ಹುಬ್ಬಳ್ಳಿ: ದಿನ ಕಳೆದಂತೆ ಕೊರೊನಾ ಕರ್ಪ್ಯೂ ಬಿಗಿಯಾಗುತ್ತಿದ್ದು, ಸಾರಿಗೆ ಬಸ್ , ಆಟೋ ರಿಕ್ಷಾಗಳನ್ನು ನಂಬಿಕೊಂಡಿದ್ದ ಅಗತ್ಯ ಸೇವೆಗಳ ಕರ್ತವ್ಯದಲ್ಲಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ಸಂಚಾರದ ಸಮಸ್ಯೆ ಎದುರಾಗುತ್ತಿದೆ. ಈ ಸಾರಿಗೆ ಸಂಕಷ್ಟದ ಬಿಸಿ ಕೊರೊನಾ ವಾರಿಯರ್‌ಗಳನ್ನು ಬಿಟ್ಟಿಲ್ಲ. ಅತಿ ಹೆಚ್ಚಾಗಿ ಮಹಿಳಾ ಸಿಬ್ಬಂದಿ ಈ ಸಮಸ್ಯೆ ಅನುಭವಿಸುತ್ತಿದ್ದಾರೆ.
ಹೌದು, ಅವಳಿ ನಗರದ ನಡುವೆ ಸಂಚರಿಸುವ ವಿವಿಧ ಇಲಾಖೆಗಳ, ಬ್ಯಾಂಕ್, ಖಾಸಗಿ ಕಂಪನಿಗಳ ಉದ್ಯೋಗಿಗಳು ಸಾರಿಗೆ ಸಂಸ್ಥೆಯ ಬಸ್ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೀಗ ಕೋವಿಡ್ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿರುವ ಪರಿಣಾಮ ಬಹುತೇಕ ಸಿಬ್ಬಂದಿ ತಮ್ಮ ಖಾಸಗಿ ವಾಹನಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ತಮ್ಮ ಸ್ವಂತ ವಾಹನಗಳು ಇಲ್ಲದ, ಬೈಕ್ ಚಾಲನೆ ಮಾಡಲು ಬಾರದವರು ಕಚೇರಿ - ಮನೆಗೆ ಓಡಾಡುವುದು ಕಷ್ಟವಾಗಿದ್ದು, ಹೆಚ್ಚಾಗಿ ಮಹಿಳಾ ಸಿಬ್ಬಂದಿ ಈ ಸಮಸ್ಯೆ ಎದುರಿಸುತ್ತಿದ್ದು, ನಡೆದಾಡುಕೊಂಡೆ ಕೆಲಸಕ್ಕೆ ಹೋಗುತ್ತಿದ್ದಾರೆ.
ಇನ್ನೂ ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಕೆಲ ಇಲಾಖೆಗಳ ಸಿಬ್ಬಂದಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಕೆಲ ಇಲಾಖೆಗಳಲ್ಲಿ ಶೇ.50 ಸಿಬ್ಬಂದಿ ಬಳಸಿಕೊಳ್ಳಲು ಸರಕಾರ ಸೂಚಿಸಿದೆ. ಆದರೆ, ಅಗತ್ಯ ಸೇವೆಯಡಿ ಬರುವ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ಪ್ರಮುಖವಾಗಿ ಆರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ, ಕಂದಾಯ ಇಲಾಖೆ ಸಿಬ್ಬಂದಿಯನ್ನು ಕೊರೊನಾ ವಾರಿಯರ್‌ಗಳು ಎಂದು ಯಾವುದೇ ವಿನಾಯಿತಿ ನೀಡಿಲ್ಲ. ಆದ್ದರಿಂದ ಹಲವಾರು ಕ್ಷೇತ್ರದಲ್ಲಿ ಸೇರಿದಂತೆ ವಾಣಿಜ್ಯ ಮತ್ತು ಕಿಮ್ಸ್ ಇನ್ನಿತರ ಕಡೆ ಕೆಲಸ ಮಾಡುತ್ತಿರುವ ಮಹಿಳೆಯರು ಸಂಚಾರ ವ್ಯವಸ್ಥೆ ಇಲ್ಲದೇ ಕಂಗಲಾಗಿದ್ದಾರೆ.
ಹುಬ್ಬಳ್ಳಿಯ ಬಹುತೇಕ ಕಡೆಯಿಂದ ಬರುವ ಮಹಿಳೆಯರು ತಮ್ಮ ವಾಹನವಿಲ್ಲದ ಕಾರಣ ಮೂರ್ನಾಲ್ಕು ಕಿಲೋಮೀಟರ್ ನಡೆದಾಡಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದು, ಮಹಿಳೆಯರ ಸಂಕಷ್ಟಕ್ಕೆ ಸರಕಾರ ಸ್ಪಂದಿಸುವ ಕೆಲಸ ಮಾಡಬೇಕಿದೆ. ಜೊತೆಗ ಸಂಚಾರ ಹಾಗೂ ಕಡಿಮೆ ದರದಲ್ಲಿ ಓಡಾಡುವ ಹಾಗೆ ಮಾಡಬೇಕು ಎಂಬುದು ಬಹುತೇಕ ಮಹಿಳೆಯರ ಒತ್ತಾಯವಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ ಹಾಗೂ ಕೆಲ ಅಗತ್ಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಬಿಎಂಟಿಸಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿಯೂ ಸಂಚಾರ ವ್ಯವಸ್ಥೆ ಕಲ್ಪಿಸಲಿ ಎನ್ನುವುದು ಮಹಿಳೆಯರ ಬೇಡಿಕೆಯಾಗಿದೆ.
ಒಟ್ಟಿನಲ್ಲಿ ಕೊರೊನಾ ವಾರಿಯರ್ಸ್ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಮಹಿಳೆಯರಿಗೆ ಸಂಚಾರ ವ್ಯವಸ್ಥೆ ಮಾಡಿ ಅವರ ಕಷ್ಟಕ್ಕೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕಿದೆ.