ಬೆಳಗಾವಿ: ತೈಲ ಬೆಲೆ ಏರಿಕೆ ಕ್ರಮ ಖಂಡಿಸಿ ಪೆಟ್ರೋಲ್ ಬಂಕಿನಲ್ಲಿ ಗ್ರಾಹಕರಿಗೆ ಪೆಟ್ರೋಲ್ ಹಾಕುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹಿಂಡಲಗಾ ರಸ್ತೆಯಲ್ಲಿರುವ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಬಿಜೆಪಿ ಸರ್ಕಾರದಲ್ಲಿ ಓರ್ವ ಶಾಸಕಿಗೆ ಪೆಟ್ರೋಲ್ ಬಿಡುವ ಪರಿಸ್ಥಿತಿ ಬಂದಿದೆ ಎಂದು ಸರ್ಕಾರವನ್ನು ಲೇವೆಡಿ ಮಾಡಿದ ಅವರು, ದೇಶದ ಪ್ರಜೆಗಳ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪುತ್ತಿದ್ದರೆ ಇತ್ತ ಪ್ರಧಾನಿ ನರೇಂದ್ರ ಮೋದಿ ಆಪ್ತರಾದ ಮುಕೇಶ್ ಅಂಬಾನಿ ಹಾಗೂ ಅದಾನಿ ಅವರಷ್ಟೇ ಶ್ರೀಮಂತರಾಗುತ್ತಿದ್ದಾರೆ. 35 ರೂ.ಗೆ ಆಮದು ಆಗುವ ತೈಲ ಬೆಲೆಯನ್ನು ದೇಶದಲ್ಲಿ ಒಂದು ಲೀಟರ್ಗೆ ನೂರರಂತೆ ಮಾರಟ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ತೈಲದ ಹೆಸರಲ್ಲಿ ಮೋದಿ ಸರ್ಕಾರ ಲೂಟಿ ಹೊಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ತೈಲ ಬೆಲೆ 50 ರೂ.ಗಿಂತ ಕಡಿಮೆ ಇತ್ತು. ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರ ಪರಿಸ್ಥಿತಿ ಸುಧಾರಿಸುವುದಿಲ್ಲ. ಸಾಮಾನ್ಯರೇ ಈ ಸರ್ಕಾರವನ್ನು ಕಿತ್ತೊಗೆಯಬೇಕು. ಇತ್ತ ಅಡುಗೆ ಅನಿಲ ದರ, ದಿನಸಿ ವಸ್ತುಗಳ ದರವೂ ಏರಿಕೆ ಆಗಿದೆ. ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.