ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷಾ ಶುಲ್ಕ ಭರಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 7ರವರೆಗೆ ವಿಸ್ತರಿಸಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿವಿಯ ಎಲ್ಲಾ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಶುಲ್ಕ ಭರಿಸಲು ಜೂನ್ 23 ಕೊನೆಯ ದಿನವಾಗಿತ್ತು. ಕೋವಿಡ್-19 ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಭರಿಸಲು ಜುಲೈ 7ರವರೆಗೆ ಕಾಲಾವಕಾಶ ನೀಡಲಾಗಿದೆ.
ಇನ್ನುಳಿದಂತೆ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಬಿಎ, ಬಿಟಿಎ, ಬಿಸಿಎ, ಬಿಎಸ್‌ಡಬ್ಲ್ಯೂ, ಬಿಎಸ್ಸಿ(ಆನರ್ಸ್), ಬಿಎಡ್ ಹಾಗೂ ಬಿಪಿಎಡ್ ಸ್ನಾತಕ ಪದವಿಗಳ ಪರೀಕ್ಷೆಗೆ ಶುಲ್ಕಭರಿಸಲು ಈಗಾಗಲೇ ಅವಧಿ ಮುಕ್ತಾಯವಾಗಿದೆ. ಇದುವರೆಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಕೂಡ ಜುಲೈ 7ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ವೆಂಕಟೇಶ್ವರಲು ತಿಳಿಸಿದ್ದಾರೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ದ ನಿಬಂಧನೆಗಳಿಗೆ ಒಳಪಟ್ಟು ಪರೀಕ್ಷಾ ಶುಲ್ಕ ಪಾವತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕ ಭರಿಸಲು ತಾಂತ್ರಿಕ ಅಥವಾ ಇನ್ನಿತರೆ ಸಮಸ್ಯೆಗಳಿದ್ದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವರ ಅನುಮತಿಯ ಮೇರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು ಎಂದು ತಿಳಿಸಿದ್ದಾರೆ.
ಪರೀಕ್ಷೆಗಳನ್ನು ನಡೆಸಲು ವಿವಿ ಸಂಪೂರ್ಣ ಸನ್ನದ್ಧವಾಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಎಂದಾದ್ರೂ ಪಾವತಿಸಲೇಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.