ಚಿಕ್ಕೋಡಿ : ಹೆರಿಗೆ ನೋವಿನಿಂದ ನರಳುತ್ತಾ ಬಂದ ಗರ್ಭಿಣಿಯನ್ನು ದಾಖಲಿಸಿಕೊಳ್ಳದೆ ಕೊರೊನಾ ನೆಪವೊಡ್ಡಿ ರಾಯಬಾಗದ ಆಸ್ಪತ್ರೆ ವೈದ್ಯರು ಅಮಾನವೀಯತೆ ತೋರಿದ್ದರು. ಇದನ್ನು ಖಂಡಿಸಿ ಗ್ರಾಮಸ್ಥರು ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಹೆರಿಗೆ ನೋವಿನೊಂದ ಗರ್ಭಿಣಿಯೋರ್ವರು ರಾಯಬಾಗ ತಾಲೂಕು ಆಸ್ಪತ್ರೆಗೆ ದಾಖಲಾಗಲು ಬಂದಿದ್ದರು. ಆದರೆ ವೈದ್ಯರು ಕೊರೊನಾ ನೆಪವೊಡ್ಡಿ ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಇದನ್ನು ಖಂಡಿಸಿ ಕುಡಚಿ ಗ್ರಾಮಸ್ಥರು ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕುಡಚಿ ಪಟ್ಟಣದಲ್ಲಿ ಕೊರೊನಾ ಪ್ರಕರಣ ಕಂಡು ಬಂದಿದ್ದು, ಅಲ್ಲಿನ ಯಾವುದೇ ರೋಗಿಯನ್ನು ನೆರೆ ಮಹಾರಾಷ್ಟ್ರದ ಮಿರಜ, ಸಾಂಗ್ಲಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ. ಇದರಿಂದ ಕುಡಚಿ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ರಾಯಬಾಗ ತಾಲೂಕಾಸ್ಪತ್ರೆಯಲ್ಲಿ ಸಿಜರಿನ್ ಹೆರಿಗೆ, ಡಯಾಲಿಸಿಸ್, ಅಪೆಂಡಿಕ್ಸ್, ಸೋನೋಗ್ರಾಫಿ, ಎಲುಬು ಕೀಲುಗಳ ಚಿಕಿತ್ಸೆಗೆ ಅನುಕೂಲವಿದ್ದರೂ ಚಿಕಿತ್ಸೆ ನೀಡುವುದಿಲ್ಲ.
ಹೆರಿಗೆ ನೋವಿನಿಂದ ನರಳುವ ಗರ್ಭಿಣಿಯರಿಗೆ ಪಟ್ಟಣದಲ್ಲಿರುವ ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಬಾನೆ ಅವರ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡುತ್ತಾರೆ. ಇದರಿಂದ ಸಹಜ ಹೆರಿಗೆಯಾಗುವಂತಿದ್ದರೂ 40-50 ಸಾವಿರ ಖರ್ಚು ಮಾಡಿ ಸಿಜರಿನ್ ಹೆರಿಗೆ ಮಾಡಿಸಿಕೊಳ್ಳುವ ದುಸ್ಥಿತಿ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ರಾಯಬಾಗ ಮತ್ತು ಕುಡಚಿ ಪಟ್ಟಣಗಳ ಆಸ್ಪತ್ರೆಗಳಲ್ಲಿ ಎಲ್ಲ ಚಿಕಿತ್ಸೆ ಸೌಲಭ್ಯಗಳನ್ನು ದೊರಕಿಸಿಕೊಡದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಮನವಿ ಸ್ವೀಕರಿಸಿದ ಕುಡಚಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.