ಹುಬ್ಬಳ್ಳಿ: ಕಂಪ್ಲಿ ಶಾಸಕ ಗಣೇಶ್ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗುಜರಾತ್ನ ಸೋಮನಾಥದಲ್ಲಿ ಗಣೇಶ್ ಅವರನ್ನು ಬಂಧಿಸಲಾಗಿದೆ. ಬಿಡದಿ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ ನಂತರ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗುವುದು ಎಂದರು.
ರಾಷ್ಟ್ರದ್ರೋಹಿ ಹೇಳಿಕೆ, ಸಂದೇಶಗಳನ್ನು ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಈ ಕುರಿತು ಡಿಜಿ-ಐಜಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಭಾರತ ಸರ್ಕಾರ ಇಂತಹ ಕೃತ್ಯಗಳ ತಡೆ ಕಾಯ್ದೆ ರೂಪಿಸಬೇಕು. ಫೇಸ್ಬುಕ್, ವಾಟ್ಸಪ್ನಲ್ಲಿ ಸಂದೇಶ ಹರಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಹುಬ್ಬಳ್ಳಿ ಸ್ಫೋಟಿಸುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸರು ಆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಪಾಕಿಸ್ತಾನ ಭಯೋತ್ಪಾದನೆ ಬಿತ್ತುವಂತ ರೋಗಗ್ರಸ್ಥ ರಾಷ್ಟ್ರ. ಆ ರಾಷ್ಟ್ರವನ್ನ ವಿಶ್ವ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು. ಯೋಧರ ಪ್ರಾಣ ತ್ಯಾಗದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.