ಬೆಂಗಳೂರು: ಅವರಿಬ್ಬರು ಸಹೋದರರು. ತುಂಬಾ ದಿನಗಳ ನಂತರ ಒಟ್ಟಿಗೆ ಕೂತು ಕುಡಿದಿದ್ದರು. ಅಷ್ಟರಲ್ಲಿ ದಿಢೀರನೇ ಬಂದ ಆಗಂತುಕರು ನಶೆಯಲ್ಲಿದ್ದ ತಮ್ಮನ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾರೆ.
ಹೌದು, ತಡರಾತ್ರಿ ಬೈಯ್ಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಜಿ.ಎಂ. ಪಾಳ್ಯದಲ್ಲಿ ಇಂಥದ್ದೊಂದು ದಾರುಣ ಹತ್ಯೆ ನಡೆದುಹೋಗಿದೆ. ಅಣ್ಣ ಸುಂದರ್ ಜೊತೆ ಆಟೋದಲ್ಲಿ ಕುಳಿತು ಕುಡಿಯುತ್ತಾ, ತನ್ನ ಮಗು ಬರ್ತ್ಡೇ ಆಚರಣೆ ಹೇಗೆಲ್ಲಾ ಆಚರಿಸಬೇಕು ಎಂದು ಮಾತನಾಡ್ತಿದ್ದ ತಮ್ಮ ವೆಂಕಟೇಶನನ್ನ ಬಿಯರ್ ಬಾಟಲಿ ಚುಚ್ಚಿ ಸಾಯಿಸಲಾಗಿದೆ.
ವೆಂಕಟೇಶನ ಪರಿಚಿತರೇ ಸಂತೋಷ್ ಎಂಬಾತನ ಬಗ್ಗೆ ಕೇಳಿಕೊಂಡು ಬಂದು ಮಾತಿಗೆ ಮಾತು ಬೆಳೆದು ಕೊನೆಗೆ ಬಿಯರ್ ಬಾಟಲಿನಿಂದ ಚುಚ್ಚಿದ್ದಾರೆ ಎನ್ನಲಾಗಿದೆ.ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ವೆಂಕಟೇಶ್ ಅದರಲ್ಲಿ ನಷ್ಟವಾಗಿದ್ದರಿಂದ ಇತ್ತೀಚಿಗೆ ಆಟೋ ಓಡಿಸಿಕೊಂಡಿದ್ದ.
ಮುಂದಿನ ಸೋಮವಾರ ತನ್ನ ಮಗು ಬರ್ತ್ ಡೇ ಇದ್ದಿದ್ದರಿಂದ ಅದ್ಧೂರಿಯಾಗಿ ಆಚರಣೆ ಮಾಡಬೇಕು ಅಂತಾ ಮನೆಯವರೊಂದಿಗೆ ಹೇಳಿಕೊಂಡಿದ್ದನಂತೆ. ನಿನ್ನೆ ರಾತ್ರಿ ಅಣ್ಣ ತಮ್ಮ ಇಬ್ಬರು ಬಹಳ ದಿನಗಳ ನಂತರ ಏರಿಯಾದ ಬಳಿ ಒಟ್ಟಿಗೆ ಆಟೋದಲ್ಲಿ ಕುಳಿತು ಕುಡಿಯುವಾಗ ಬಂದ ಮೂರ್ನಾಲ್ಕು ಜನರ ಗುಂಪು ವೆಂಕಟೇಶನನ್ನ ಕರೆದು ಮಾತನಾಡಲಾರಂಭಿಸಿದೆ.
ಪರಿಚಿತರೇ ಆಗಿದ್ರಿಂದ ನಾನು ಮಾತನಾಡಿಕೊಂಡು ಬರ್ತೀನಿ ನೀನು ಮನೆಗೆ ಹೋಗು ಅಂತಾ ವೆಂಕಟೇಶ್ ತನ್ನ ಅಣ್ಣನಿಗೆ ಹೇಳಿದ್ದಾನೆ. ಸ್ವಲ್ಪ ದೂರ ಹೋದ ಅಣ್ಣ ಸುಂದರ್ ಹೇಗೂ ಕುಡಿದಿದ್ದಾನೆ ಬಿಟ್ಟು ಹೋಗೋದು ಸರಿಯಲ್ಲ ಅಂತಾ ಮನಸ್ಸು ತಡಿಯದೆ ವಾಪಾಸ್ ಬಂದು ನೋಡುವಷ್ಟರಲ್ಲಿ ವೆಂಕಟೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.
ಸದ್ಯ ಮೃತನ ಶವವನ್ನ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಆದರೆ ಆರ್ಥಿಕವಾಗಿ ಸಂಕಷ್ಟವಿದ್ರೂ ಅದ್ಧೂರಿಯಾಗಿ ಆಚರಿಸಬೇಕು ಅಂತ ಪತ್ನಿ, ತಾಯಿ, ಅಣ್ಣನ ಬಳಿ ಹೇಳಿಕೊಂಡಿದ್ದವ ತನ್ನದಲ್ಲದ ತಪ್ಪಿಗೆ ಎಲ್ಲರನ್ನೂ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದು ದುರಂತವೇ ಸರಿ!