ಬಳ್ಳಾರಿ: ರಾಜ್ಯದ ಮೈತ್ರಿಕೂಟದ ಸರ್ಕಾರ ಜಿಂದಾಲ್ ಉಕ್ಕು ಕಾರ್ಖಾನೆಗೆ 3667 ಎಕರೆ ಭೂಮಿ ಪರಭಾರೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಡಿಎಲ್.ರಮೇಶ ಗೋಪಾಲ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೆ.ಸಿ.ರಸ್ತೆಯಲ್ಲಿರುವ ಕೈಗಾರಿಕಾ ಸಂಸ್ಥೆಯ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಸಾವಿರಾರು ಎಕರೆ ಭೂಮಿ ಪರಭಾರೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದವರು ಈಗ ವಿರೋಧಿಸುತ್ತಿರುವುದು ಸರಿಯಲ್ಲ. ಗಣಿ ಜಿಲ್ಲೆಗೆ ಜಿಂದಾಲ್ ಉಕ್ಕು ಕಾರ್ಖಾನೆ ವರದಾನವಾಗಿದೆ ಎಂದರು.
ಜಿಲ್ಲೆಯಲ್ಲಿ ನಿರುದ್ಯೋಗವೂ ಜ್ವಲಂತ ಸಮಸ್ಯೆಯಾಗಿದೆ. ಅದನ್ನು ತಗ್ಗಿಸಲು ಜಿಂದಾಲ್ ಸಂಸ್ಥೆಯು ಪ್ರಾಮಾಣಿಕವಾಗಿ ಶ್ರಮಿಸಿದೆ. ಆದರೂ ಭೂಮಿ ಪರಭಾರೆ ಹೆಸರಿನಡಿ ರಾಜಕಾರಣ ಮಾಡುವುದು ತರವಲ್ಲ ಎಂದರು.
25 ಸಾವಿರ ಉದ್ಯೋಗ ಸೃಷ್ಟಿ: ಜಿಲ್ಲೆಯಲ್ಲಿ 25 ಸಾವಿರ ಉದ್ಯೋಗ ಸೃಷ್ಟಿಸುವಲ್ಲಿ ಜಿಂದಾಲ್ ಉಕ್ಕು ಕಾರ್ಖಾನೆ ಸಹಕಾರಿಯಾಗಿದೆ. ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನವನ್ನು ಜೂನ್ 8 ರಂದು ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಂದಾಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಸಾಧ್ಯತೆ ಇದೆ. ರಾಜ್ಯದ ವಿವಿಧೆಡೆಯಿಂದ 300ಕ್ಕೂ ಹೆಚ್ಚು ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.