ಲಂಡನ್: ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಗುಂಗುನಿಸುತ್ತಿರುವ ಹಾಡೊಂದೇ. ಅದು Rain rain go away ಅನ್ನೋದು. ಯಾಕೆ ಗೊತ್ತೇ? ಇದೇ 16 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಅತ್ಯಂತ ರೋಚಕ ಹಣಾಹಣಿಯ ನಿರೀಕ್ಷೆ ಇದೆ. ಹಾಗಾಗಿ ಕನಿಷ್ಟ ಪಕ್ಷ ಅವತ್ತಾದ್ರೂ ಮಳೆ ಬಾರದಿರಲಿ ಅಂತ ಅಪಾರ ಕ್ರಿಕೆಟ್ ಅಭಿಮಾನಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಹವಾಮಾನ ಹೇಗಿರಲಿದೆ ಅಂತ ನೆಟ್ಟಿಗರಿಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕೋದೇ ಕೆಲಸವಾಗಿಬಿಟ್ಟಿದೆ.
ಆಂಗ್ಲರ ದೇಶದ ಕ್ಲಿಷ್ಟಕರ ಹವಾಮಾನವನ್ನು ನಿಖರವಾಗಿ ಹೇಳುವುದು ಅತ್ಯಂತ ಕಷ್ಟಕರ ಎಂಬ ಮಾತಿದೆ. ಹೀಗಾಗಿ ಈ ಬಾರಿ ವಿಶ್ವಕಪ್‌ನ ನಾಲ್ಕು ಮಹತ್ವದ ಪಂದ್ಯಗಳು ಮಳೆಗೆ ಆಹುತಿಯಾಗಿದೆ. ನಿನ್ನೆ ಭಾರತ v/s ನ್ಯೂಜಿಲೆಂಡ್ ಪಂದ್ಯ ನೋಡಲು ಕೋಟ್ಯಂತರ ಅಭಿಮಾನಿಗಳು ಟಿವಿ ಮುಂದೆ ಕುಳಿತಿದ್ದು, ಕೇವಲ ಮಳೆ ಆಟವನ್ನಷ್ಟೇ ನೋಡುವಂತಾಯ್ತು. ಹಾಗಾಗಿ ಜೂನ್ 16 ರಲ್ಲಾದ್ರೂ ಮಳೆ ಬಾರದಿರಲಪ್ಪಾ ಅಂತಾ ಕೈ ಮುಗಿದು ದೇವರಿಗೆ ಪ್ರಾರ್ಥಿಸುತ್ತಿದ್ದಾರೆ.
ಭಾರತ ನ್ಯೂಜಿಲೆಂಡ್ ಪಂದ್ಯ ಮಳೆಯಿಂದ ರದ್ದಾದ ಪರಿಣಾಮ ಟ್ವಿಟ್ಟರಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅನೇಕರು ಇಂಗ್ಲೆಂಡ್ ಐಸಿಸಿ ಕ್ರಿಕೆಟ್ ಆಯೋಜನೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಫರ್ಡ್ ಕ್ರೀಡಾಂಗಣದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಾಲದಲ್ಲಿ, ಮ್ಯಾಂಚೆಸ್ಟರ್‌ನಲ್ಲಿ ಹಾವಾಮಾನ ಹೇಗಿದೆ? ಇಲ್ಲಿ ಇವತ್ತಿಗೆ ಹವಾಮಾನ ಹೇಗಿದೆ? ಎಂದೆಲ್ಲಾ ಜಾಲಾಡುತ್ತಿದ್ದಾರೆ.
ಮ್ಯಾಚ್ ನಡೆಯೋ ದಿನದ ವೆದರ್ ರಿಪೋರ್ಟ್ ಏನು ಹೇಳುತ್ತೆ?
ಇಂಗ್ಲೆಂಡ್‌ನ ಹವಾಮಾನ ವರದಿಯ ಪ್ರಕಾರ, ಈ ಪಂದ್ಯ ಕೂಡಾ ಮಳೆಗೆ ಆಹುತಿಯಾಗುವ ಸಾಧ್ಯತೆ ದಟ್ಟವಾಗಿದೆ. ಪಂದ್ಯ ಎರಡನೇ ಇನ್ನಿಂಗ್ಸ್ ವೇಳೆ ಮಳೆ ಅಡೆತಡೆ ಉಂಟುಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಅವತ್ತು ಮಳೆ ಬೆಳಕಿನ ಕಣ್ಣಾಮುಚ್ಚಾಲೆ ಆಟ ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ನಿರೀಕ್ಷೆಯಂತೂ ಇದೆ.