ಬೆಳಗಾವಿ: ಕುಂದಾನಗರಿಯಲ್ಲಿ ನಡೆಯುತ್ತಿರುವ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಎ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು ಲಂಕಾ ಎ ವಿರುದ್ಧದ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 355 ರನ್ ಗಳಿಸಿದೆ.
ಬೆಳಗಾವಿಯ ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ಇಂದಿನಿಂದ ಭಾರತ-ಎ ಹಾಗೂ ಶ್ರೀಲಂಕಾ-ಎ ತಂಡಗಳ ಮಧ್ಯೆ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ನಾಯಕ ಪ್ರಿಯಾಂಕ್ ಪಾಂಚಾಲ್ (152) ಹಾಗೂ ಅಭಿಮನ್ಯು ಈಶ್ವರನ್ (172) ಶತಕ ಸಿಡಿಸಿ ಶ್ರೀಲಂಕಾ ಬೌಲರ್ಗಳ ಬೆವರಿಳಿಸುತ್ತಿದ್ದಾರೆ.
80 ಓವರ್ಗಳನ್ನು ಯಶಸ್ವಿಯಾಗಿ ಎದುರಿಸಿರುವ ಈ ಜೋಡಿ ಬರೋಬ್ಬರಿ 337 ರನ್ ಸೂರೆಗೈದಿದೆ. 254 ಎಸೆತಗಳನ್ನೆದುರಿಸಿರುವ ಪಂಚಾಲ್ 7 ಬೌಂಡರಿ,2 ಸಿಕ್ಸರ್ ಸಹಿತ 152 ಹಾಗೂ ಅಭಿಮನ್ಯು ಈಶ್ವರನ್ 234 ಎಸೆತಗಳಲ್ಲಿ 172 ರನ್ ಗಳಿಸಿದ್ದಾರೆ. ಈಶ್ವರನ್ ಇನ್ನಿಂಗ್ಸ್ನಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ.
ಶ್ರೀಲಂಕಾ ತಂಡ ಈ ಜೋಡಿಯನ್ನು ಬೇರ್ಪಡಿಸಲು ಲಹಿರು ಕುಮಾರ, ಸಂದಕನ್ ಹಾಗೂ ಅಕಿಲಾ ಧನಂಜಯಾರಂತಹ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವುಳ್ಳ ಬೌಲರ್‌ಗಳೂ ಸೇರಿದಂತೆ ಬರೋಬ್ಬರಿ 8 ಬೌಲರ್ಗಳನ್ನು ಪ್ರಯೋಗಿಸಿದರೂ ಪ್ರಯೋಜನವಾಗಿಲ್ಲ.