ಲಂಡನ್: ಐಸಿಸಿ ಏಕದಿನ ಮಹಾಟೂರ್ನಿಯಲ್ಲಿ ಜೂನ್ 16ರಂದು ಸಾಂಪ್ರದಾಯಿಕ ಎದುರಾಳಿ ತಂಡ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದಕ್ಕೂ ಮುಂಚಿತವಾಗಿ ಕ್ಯಾಪ್ಟನ್ ಕೊಹ್ಲಿ ಕೂಡ ಈ ವಿಷಯವಾಗಿ ಮಾತನಾಡಿದ್ದಾರೆ.
ನಾಟಿಂಗ್ಹ್ಯಾಮ್ನಲ್ಲಿ ಇಂದು ಭಾರತ-ನ್ಯೂಜಿಲೆಂಡ್ ನಡುವೆ ನಡೆಯಬೇಕಾಗಿದ್ದ ಪಂದ್ಯ ಮಳೆಯ ಕಾರಣ ರದ್ಧಾಗಿದೆ. ಇದಾದ ಬಳಿಕ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಪಂದ್ಯ ರದ್ಧಾಗಿರುವುದು ನಿರಾಸೆ ಮೂಡಿಸಿದೆ. ರಭಸವಾಗಿ ಮಳೆ ಸುರಿದ ಕಾರಣ ಮೈದಾನ ಸಂಪೂರ್ಣವಾಗಿ ತೇವವಾಗಿದ್ದು, ಇಲ್ಲಿ ಪ್ಲೇಯರ್ಸ್ ಮೈದಾನಕ್ಕಿಳಿಯವುದು ಸೇಫ್ ಅಲ್ಲ. ಜತೆಗೆ ಈ ಸನ್ನಿವೇಶದಲ್ಲಿ ನಮ್ಮ ಆಟಗಾರರು ಫಿಟ್ ಆಗಿರುವುದು ಕೂಡ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಪಾಕಿಸ್ತಾನ ವಿರುದ್ಧದ ಹಣಾಹಣಿ ಬಗ್ಗೆ ಮಾತನಾಡಿರುವ ಕೊಹ್ಲಿ, ಪಾಕ್ ವಿರುದ್ಧ ಪಂದ್ಯ ಆಡಲು ಮೈದಾನಕ್ಕಿಳಿದಾಗ ಎಲ್ಲವೂ ಶಾಂತವಾಗಿರುತ್ತದೆ. ಬೇರೆ ತಂಡಗಳ ವಿರುದ್ಧ ಆಡುವ ರೀತಿಯಲ್ಲೇ ಈ ಪಂದ್ಯವನ್ನೂ ನಾವು ತೆಗೆದುಕೊಳ್ಳಲಿದ್ದು, ಎಲ್ಲರೂ ವೃತ್ತಿಪರ ಕ್ರಿಕೆಟರುಗಳು ಆಗಿರುವ ಕಾರಣ ತಮ್ಮ ಕರ್ತವ್ಯ ಏನು ಎಂಬುದು ಅವರಿಗೆ ಗೊತ್ತು ಎಂದರು.
ಶಿಖರ್ ಧವನ್ ಗಾಯದ ಬಗ್ಗೆ ಮಾಹಿತಿ ನೀಡಿದ ಕೊಹ್ಲಿ, ಹೆಬ್ಬೆರಳಿನ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿರುವ ಅವರು, ಸೆಮಿಫೈನಲ್ ವೇಳೆಗೆ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.