ಲಂಡನ್: ಫಿಂಚ್ ಸಿಡಿಲಬ್ಬರದ ಶತಕ ಹಾಗೂ ಬೌಲರ್ಗಳ ಸಾಂಘಿಕ ದಾಳಿಯ ಎದುರು ಏಕಾಏಕಿ ಕುಸಿದ ಶ್ರೀಲಂಕಾ ಐಸಿಸಿ ವಿಶ್ವಕಪ್ನಲ್ಲಿ ಮತ್ತೊಂದು ಸೋಲು ಕಂಡಿದೆ. ಇತ್ತ ಜವಾಬ್ದಾರಿಯುತ ಗೆಲುವು ದಾಖಲು ಮಾಡಿರುವ ಕಾಂಗರೂ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಅಮೋಘ ಶತಕ ಹಾಗೂ ಸ್ಟೀವ್ ಸ್ಮಿತ್ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 334 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಬೃಹತ್ ಗುರಿ ಬೆನ್ನಟ್ಟಿದ ಲಂಕಾ ಬಿರುಸಿನ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಪರೇರಾ ಮೊದಲ ವಿಕೆಟ್ ನಷ್ಟಕ್ಕೆ 15.3 ಓವರ್ಗಳಲ್ಲೇ 115ರನ್ ಪೇರಿಸಿತು. ಈ ವೇಳೆ 56 ರನ್ ಗಳಿಸಿದ್ದ ಪರೇರಾ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕರುಣರತ್ನೆ ಜತೆ ಕ್ರೀಸ್ ಹಂಚಿಕೊಂಡ ತಿರುಮನ್ನೆ 16 ರನ್ ಗಳಿಸಿ ನಿರಾಸೆ ಮೂಡಿಸಿದರು. ಇದಾದ ಬಳಿಕ ಬಂದ ಕುಸಾಲ್ ಮೆಂಡಿಸ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ಈ ಮಧ್ಯೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದಿಮುತ್ 97 ರನ್ ಗಳಿಸಿದ ವೇಳೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಆಸೀಸ್ ಬೌಲಿಂಗ್ ದಾಳಿ ಎದುರು ಏಂಜೆಲೋ ಮ್ಯಾಥ್ಯೂಸ್ (9), ಮಿಲಿಂದ ಸಿರಿವರ್ಧನ್ (3) ತಿಸಾರಾ ಪರೇರಾ (7), ಉದ್ದನ್(8), ಮಲಿಂಗಾ(1), ಪ್ರದೀಪ್(0) ಹಾಗೂ ಸಿಲ್ವಾ ಅಜೇಯ(16)ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಕೊನೆಯದಾಗಿ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 45.5 ಓವರ್‌ಗಳಲ್ಲಿ 247 ರನ್ಗಳಿಗೆ ಆಲೌಟ್ ಆಗುವುದರ ಮೂಲಕ 87 ರನ್‌ಗಳ ಸೋಲು ಕಾಣುವಂತಾಯಿತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್, ಕೇನ್ ರಿಚರ್ಡ್ಸನ್ 3 ವಿಕೆಟ್ ಪಡೆದು ಮಿಂಚಿದರೆ, ಕುಮಿನ್ಸ್ 2 ವಿಕೆಟ್ ಹಾಗೂ ಜಾಸನ್ ಬಹ್ರೆನ್ಡ್ರಾಫ್ 1ವಿಕೆಟ್ ಪಡೆದುಕೊಂಡರು.
ಆಸ್ಟ್ರೇಲಿಯಾ ಇಲ್ಲಿಯವರೆಗೆ ತಾನು ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿದ್ದು, ಭಾರತದ ವಿರುದ್ಧ ಮಾತ್ರ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 8 ಅಂಕ ಗಳಿಸಿರುವ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ.