ಬೆಂಗಳೂರು: ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಳೆಗಾಲದ ಸಂದರ್ಭಗಳಲ್ಲಿ ನದಿಗಳಿಂದ ಮರಳು ತೆಗೆಯುವಂತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊರಡಿಸಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಪ್ರತಿವರ್ಷ ಜೂನ್ 5ರಿಂದ ಅಕ್ಟೋಬರ್ 15ರವರೆಗೆ ನದಿಗಳಿಂದ ಮರಳು ತೆಗೆಯುವುದನ್ನು ನಿಷೇಧಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚಾಮರಾಜನಗರ ಉಪನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಫಕೀರಪ್ಪ ಎಂ ಮುರ್ಗೋಡ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶವನ್ನು ಎತ್ತಿ ಹಿಡಿದಿದ್ದು, ಅರ್ಜಿದಾರರ ತಕರಾರನ್ನು ವಜಾ ಮಾಡಿದೆ.
ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ 10ನೇ ಷರತ್ತಿನಲ್ಲಿ ಮಳೆಗಾಲದಲ್ಲಿ ನದಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಅಂತೆಯೇ ಕರ್ನಾಟಕ ಮೈನ್ಸ್ ಆ್ಯಂಡ್ ಮಿನರಲ್ಸ್ ರಿಯಾಯಿತಿ ನಿಯಮಗಳು-1994 ಮತ್ತು ಸುಸ್ಥಿರ ಮರಳು ಗಣಿಗಾರಿಕೆ ನಿರ್ವಹಣಾ ಮಾರ್ಗಸೂಚಿಗಳು ಕೂಡ ಮಳೆಗಾಲದಲ್ಲಿನ ನದಿ ಮರಳು ಗಣಿಗಾರಿಕೆಯನ್ನು ನಿಷೇಧಿಸುತ್ತವೆ. ಹೀಗಾಗಿ ರಾಜ್ಯದಲ್ಲಿ ಜೂನ್ ನಿಂದ ಅಕ್ಟೋಬರ್ ವರೆಗೆ ಮಳೆಗಾಲ ಇರುವ ಕಾರಣ ಈ ಸಂದರ್ಭದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡದಿರುವ ಇಲಾಖೆಯ ಕ್ರಮ ಸರಿಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಕೋರಿಕೆ :
2017ರ ಆಗಸ್ಟ್ 10ರಂದು ಮರಳು ಗಣಿಗಾರಿಕೆಗೆ ಐದು ವರ್ಷಗಳ ಅವಧಿಗೆ ಅನುಮತಿ ಪಡೆದಿದ್ದು, ಈ ವೇಳೆ ಮಳೆಗಾಲದಲ್ಲಿ ಮರಳು ಗಣಿಗಾರಿಕೆ ನಡೆಸಬಾರದು ಎಂಬ ಷರತ್ತು ವಿಧಿಸಿರಲಿಲ್ಲ. ಈ ಸಂಬಂಧ ರಾಜ್ಯದಲ್ಲಿ ಯಾವ ನಿಯಮಾವಳಿಯೂ ಇಲ್ಲ. ಹಾಗಿದ್ದೂ 2020ರ ಜೂನ್ ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾ ಉಪನಿರ್ದೇಶಕರು ಮಳೆಗಾಲದಲ್ಲಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಬಾರದು ಎಂದು ಆದೇಶಿಸಿರುವ ಕ್ರಮ ಸರಿಯಲ್ಲ ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.