ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಭಾರತೀಯ ವಾಯುಪಡೆ ತನ್ನ ಆಸ್ಪತ್ರೆಯಲ್ಲಿ 100 ಬೆಡ್ಗಳನ್ನು ನೀಡಿದ್ದರೂ ಅವುಗಳನ್ನು ಬಳಸಿಕೊಂಡಿಲ್ಲವೇಕೆ ಎಂದು ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ 24 ಗಂಟೆಯೊಳಗೆ ಅವುಗಳನ್ನು ಪಡೆದು ಚಿಕಿತ್ಸೆಗೆ ಬಳಸುವಂತೆ ತಾಕೀತು ಮಾಡಿದೆ.
ಕೋವಿಡ್ ಚಿಕಿತ್ಸೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಎಂ ಎನ್ ಕುಮಾರ್ ಅವರು ಪೀಠಕ್ಕೆ ಮಾಹಿತಿ ನೀಡಿ, ಭಾರತೀಯ ವಾಯುಪಡೆ ತನ್ನ ಆಸ್ಪತ್ರೆಯಲ್ಲಿ 100 ಬೆಡ್ ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೀಡಿದೆ. ಬೆಡ್ ಅಷ್ಟೇ ಅಲ್ಲದೇ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನೂ ನೀಡಿದೆ. ಆದರೆ ಬಿಬಿಎಂಪಿ ಈ ಸೌಲಭ್ಯವನ್ನು ಬಳಸಿಕೊಂಡಿಲ್ಲ ಎಂದು ತಿಳಿಸಿದರು.
ಮಾಹಿತಿ ಪರಿಗಣಿಸಿದ ಪೀಠ, ವಾಯುಪಡೆ ಮುಂದಾಗಿ ಸೌಲಭ್ಯ ನೀಡಿದ್ದರೂ ಬಿಬಿಎಂಪಿ ಬಳಸಿಕೊಂಡಿಲ್ಲವೇಕೆ ಎಂದು ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ಬಿಬಿಎಂಪಿಗೆ ಮುಂದಿನ 24 ಗಂಟೆಯೊಳಗೆ 100 ಬೆಡ್ಗಳನ್ನು ಪಡೆದುಕೊಂಡು ಸೋಂಕಿತರ ಚಿಕಿತ್ಸೆಗೆ ಬಳಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತು.
ವಾಯುಪಡೆ ನೀಡಿರುವ ಬೆಡ್ಗಳು ಹಾಗೂ ರೈಲ್ವೆ ಇಲಾಖೆ ಒದಗಿಸಿರುವ ಬೆಡ್ಗಳನ್ನು ಬಿಬಿಎಂಪಿ ಬಳಸಿಕೊಂಡಿಲ್ಲವೇಕೆ ಎಂಬುದರ ಕುರಿತು ವಿವರಣೆ ನೀಡುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.