ಮಂಡ್ಯ: ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಯಾಕೆ ಹೊಂದಾಣಿಕೆ ಇಲ್ಲ. ಈಗ ಐದು ಜನ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅವರು ಯಾವ ರೀತಿ ಕೆಲಸ ಮಾಡ್ತಾರೆ ನೋಡೋಣ ಎಂದರು.
ಸುಧಾಕರ್ ಬೇಸರದಿಂದ ಕ್ಯಾಬಿನೆಟ್ ಸಭೆಯಿಂದ ಹೊರ ನಡೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಲವಾರು ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದೀನೆ. ಸಭೆ ನೆಪದಲ್ಲಿ ಅಧಿಕಾರಿಗಳ ಸಮಯ ವ್ಯರ್ಥ ಮಾಡ್ತಿದ್ದೀರಿ. ಇದೆಲ್ಲವನ್ನೂ ನಿಲ್ಲಿಸಿ, ಅಧಿಕಾರಿಗಳಿಗೆ, ಸಚಿವರಿಗೆ ಜವಾಬ್ದಾರಿ ಕೊಡಿ ಎಂದು ಸಲಹೆ ನೀಡಿದರು. ನಿನ್ನೆ ಬೆಂಗಳೂರಿನಲ್ಲಿ ದೊಡ್ಡ ಡ್ರಾಮಾ ನಡೆದಿದೆ. ಚಾಮರಾಜನಗರದ ಲೋಪ ಮುಚ್ಚಲು ನಡೆಸಿರುವ ಡ್ರಾಮಾ ಇದು. ಸಂಕಷ್ಟದ ಸಮಯದಲ್ಲಿ ಆಸ್ಪತ್ರೆಯಲ್ಲಿ ರಾಜಕಾರಣ ಬೇಕಾ? ಎಂದು ಪ್ರಶ್ನೆ ಮಾಡಿದ ಅವರು, ಆಸ್ಪತ್ರೆಯಲ್ಲಿ ಕೆಲಸ ಮಾಡೋರು ಯಾವ ಜಾತಿಯವರಾದರೇನು? ಇಲ್ಲೇನು ಮದರಸ ಮಾಡ್ತಿದ್ದೀರ ಅಂತಾ ಪ್ರಶ್ನೆ ಮಾಡ್ತೀರ? ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಬಂಧಿತ ನೇತ್ರಾವತಿ ಅನ್ನೋಳು ಎನ್ಜಿಓ ಒಂದರ ಮುಖ್ಯಸ್ಥೆ. ಆಕೆಯನ್ನ ಆಸ್ಪತ್ರೆಗೆ ಕರ್ತವ್ಯಕ್ಕೆ ನೇಮಿಸಿದ್ದು ಯಾರು? ಎಂದು ಪ್ರಶ್ನಿಸಿದರಲ್ಲದೆ, ಬೆಡ್ ಬ್ಲಾಕ್ ದಂಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನಿಮ್ಮ ಈ ಸರ್ಕಾರಕ್ಕೆ ಯೋಗ್ಯತೆ, ಮಾನ ಮರ್ಯಾದೆ ಇದ್ದರೆ. ಈ ರಾಜ್ಯದ ಜನರನ್ನ ಪ್ಯಾನಿಕ್ ಮಾಡಬೇಡಿ. ನಿಮ್ಮ ಲೋಪಗಳನ್ನ ಮುಚ್ಚಿಕೊಳ್ಳಲು ಹೊಸ ಡ್ರಾಮಾ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಸಿಬಿ ತನಿಖೆಗೆ ಕೊಡ್ತೀನಿ ಅಂತೀರಿ. ಈಗಾಗಲೇ ಡ್ರಗ್ಸ್ ಕೇಸ್, ಸಿಡಿ ಕೇಸ್ ಏನಾಯ್ತು ಎಲ್ಲವೂ ಗೊತ್ತಿದೆ. ಇದರಲ್ಲಿ ಸರ್ಕಾರದ ಲೋಪವಿದೆ. ನಿನ್ನೆ ದೊಡ್ಡ ಸಾಧನೆ ಮಾಡಿದ ಬಗ್ಗೆ ಹೇಳ್ತಾರೆ. ತನ್ನ ಕ್ಷೇತ್ರದ ಒಬ್ಬನಿಗೆ ಬೆಡ್ ಕೊಡಿಸೋಕೆ ಆಗಲಿಲ್ಲ. ನಿನ್ನೆಯಿಂದ ಬೆಡ್ಗಾಗಿ ಅಲೆಯುತ್ತಿದ್ದಾನೆ. ಬಿಬಿಎಂಪಿಗೆ 20-30 ಲಕ್ಷ ಕೊಟ್ಟು ಬರ್ತಾನೆ. ಅವನು ಹೇಗೆ ವರದಿ ಕೊಡ್ತಾನೆ ಎಂದು ಕಿಡಿಕಾರಿದರು. ವಿಧಾನಸೌಧದ ಲೆವಲ್ನಲ್ಲಿ ದಂಧೆ ನಡೆಯುತ್ತಿದೆ. ಬೆಂದ ಮನೆಯಲ್ಲಿ ಹಿರಿಯುವ ಕೆಲಸವನ್ನ ನಾವ್ಯಾರು ಮಾಡೋದು ಬೇಡ. ನೊಂದವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡೋಣ ಎಂದರು.
ಪ್ರಧಾನಿ ಮೋದಿ ನಡೆಗೆ ವ್ಯಂಗ್ಯ:
ವಿಶ್ವಗುರು ಎನಿಸಿಕೊಳ್ಳಲು ವಿದೇಶಗಳಿಗೆ ದಾನ ಮಾಡಿದ್ರು. ಈಗ ವ್ಯಾಕ್ಸಿನ್ ಅಭಾವ ಹೆಚ್ಚಾಗಿದೆ. ವಿದೇಶಗಳಿಂದಾದರೂ ಸರಿ ಕನಿಷ್ಠ 50 ಲಕ್ಷ ವ್ಯಾಕ್ಸೀನ್ ತಕ್ಷಣ ತರಿಸಲಿ. ಮಾರ್ಚ್ 15ರಲ್ಲೇ ನಾನು ಲಾಕ್ಡೌನ್ ಮಾಡಿ ಅಂದಿದ್ದೆ. ಲಾಕ್ಡೌನ್ ಜೊತೆಗೆ ಬಡವರಿಗೆ ಅಗತ್ಯ ನೆರವು ಕೊಡಿ ಎಂದು ಸಲಹೆ ನೀಡಿದರು. ಒಂದು ವರ್ಷ ಅಭಿವೃದ್ಧಿ ಕೆಲಸ ನಿಲ್ಲಿಸಿ. ತಕ್ಷಣಕ್ಕೆ ತಂಬ್ ಇಂಪ್ರೆಶನ್ ಕಿತ್ತೆಸೆಯಿರಿ. ಎಲ್ಲಾ ಬಡವರಿಗೆ ಉಚಿತ ಪಡಿತರ ಕೊಡಿ ಎಂದರಲ್ಲದೆ ರೆಮ್ ಡಿಸಿವೆರ್ ಸಿಕ್ತಿಲ್ಲ. ಬಹುತೇಕರು ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದಾರೆ. ಈ ಸರ್ಕಾರದಿಂದ ಯಾರೂ ಏನೂ ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ ಎಂದು ದೂರಿದರು.