ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನೆಲಮಂಗಲದ ನಾಲ್ಕು ಜನ ಜೆಡಿಎಸ್ ಮುಖಂಡರ ಮೃತದೇಹಗಳನ್ನು ತಡರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದೆ.
ಕಳೆದ ಮೂರು ದಿನಗಳಿಂದಲೂ ಶ್ರೀಲಂಕಾದಲ್ಲೇ ಬೀಡು ಬಿಟ್ಟಿದ್ದ ನೆಲಮಂಗಲ ಶಾಸಕ ಡಾ.ಶ್ರೀನಿವಾಸ ಮೂರ್ತಿ ಮತ್ತು ಪರಿಷತ್ ಸದಸ್ಯ ಇ.ಕೃಷ್ಣಪ್ಪ ಜೊತೆ ಇನ್ನೂ ಅಲ್ಲೆ ಉಳಿದುಕೊಂಡಿದ್ದ 12 ಜನ ಬೆಂಗಳೂರು ಮೂಲದ ಪ್ರವಾಸಿಗರೂ ಇದೇ ವೇಳೆ ತಾಯ್ನಾಡಿಗೆ ಆಗಮಿಸಿದ್ದಾರೆ.
ಹನುಮಂತರಾಯಪ್ಪ ಮತ್ತು ರಂಗಪ್ಪ ಮೃತ ದೇಹಗಳನ್ನ ದಾಸರಹಳ್ಳಿಯ ಚೊಕ್ಕಸಂದ್ರಕ್ಕೆ ಮತ್ತು ಗೋವೆನಳ್ಳಿ ಶಿವಕುಮಾರ್ ಮತ್ತು ಕಾಚೇನಹಳ್ಳಿ ಲಕ್ಷ್ಮಿನಾರಾಯಣ್ ಅವರ ಪಾರ್ಥಿವ ಶರೀರವನ್ನ ನೆಲಮಂಗಲದ ಜೂನಿಯರ್ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಇ.ಕೃಷ್ಣಪ್ಪ ತಿಳಿಸಿದ್ದಾರೆ.
ಇನ್ನು ಮೂರು ದಿನಗಳ ಕಾಲ ಸರ್ಕಾರದ ಪ್ರತಿನಿಧಿಯಾಗಿ ಶ್ರೀಲಂಕಾದಲ್ಲಿದ್ದ ನೆಲಮಂಗಲ ಶಾಸಕರ ಡಾ.ಶ್ರೀನಿವಾಸ್ ಮೂರ್ತಿ ಮೃತರೆಲ್ಲರೂ ನಮ್ಮ ಆತ್ಮೀಯರು ಎಂದು ಭಾವುಕರಾಗಿ ನುಡಿದಿದ್ದಾರೆ.
ಮೃತದೇಹಗಳಿಗೆ ಗೃಹ ಸಚಿವ ಎಂ.ಬಿ ಪಾಟೀಲ್ ಅಂತಿಮ ನಮನ ಸಲ್ಲಿಸಿ ನಾಲ್ಕು ಆ್ಯಂಬುಲೆನ್ಸ್ ಮೂಲಕ ಸ್ವಗ್ರಾಮಗಳಿಗೆ ಪೊಲೀಸ್ ಭದ್ರತೆಯಲ್ಲಿ ಬೀಳ್ಕೊಟ್ಟರು.