ಉಡುಪಿ: ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟು ಕಾಣೆಯಾಗಿ 82 ದಿನಗಳಾಗಿದ್ದು, ಈ ದುರ್ಘಟನೆಯಲ್ಲಿ ಏಳು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಆದರೆ ಈ ಕುರಿತು ಸರ್ಕಾರ ಮಾತ್ರ ಬೇಜವಾಬ್ದಾರಿ ತೋರಿದ್ದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ನಡು ಕಡಲಲ್ಲಿ ಕಾಣೆಯಾದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟು ಇನ್ನೂ ಪತ್ತೆಯಾಗಿಲ್ಲ. ಬೋಟ್ ಕಾಣೆಯಾಗಿ ಬರೋಬ್ಬರಿ 82 ದಿನಗಳಾಗಿದೆ. ಅರಬ್ಬೀ ಸಮುದ್ರದಲ್ಲಿ ಸಂಪರ್ಕ ಕಳೆದುಕೊಂಡ ಪ್ರದೇಶದ ಇಂಚಿಂಚೂ ಜಾಲಾಡಿದರೂ ಬೋಟಿನ ಕುರುಹೇ ಸಿಕ್ಕಿಲ್ಲ. ಏಳು ಮಂದಿ ಮೀನುಗಾರರ ಕುಟುಂಬದ ನೋವು, ಸಾವಿರಾರು ಮೀನುಗಾರರ ಅಸಹಾಯಕತೆಗೆ ಉತ್ತರವೇ ಇಲ್ಲವಾಗಿದೆ ಎಂದು ಜನ ಆಕ್ರೋಶಗೊಂಡಿದ್ದಾರೆ.
ಇನ್ನು, ಮೀನುಗಾರರು ಪತ್ತೆಯಾಗುವವರಗೆ ಉಡುಪಿ ಬಿಟ್ಟು ಹೋಗಲ್ಲ ಎಂದಿದ್ದ ಉಸ್ತುವಾರಿ ಸಚಿವೆ, ಮತ್ತೆ ಮೀನುಗಾರಿಕಾ ಬಂದರಿಗೆ ಮುಖ ಹಾಕಿಲ್ಲ. ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಭೇಟಿ ಮಾಡಿ ಹೋದವರು ಕನಿಷ್ಠ ಮೀನುಗಾರರ ಸಭೆಯನ್ನೂ ಕರೆದಿಲ್ಲ. ಇನ್ನು ಸಂಸದೆ ಶೋಭಾ ಕರಂದ್ಲಾಜೆ ಏನೂ ಪ್ರಯತ್ನ ಮಾಡಿಲ್ಲ. ಹಾಗಾಗಿ ಮೀನುಗಾರ ಸಮುದಾಯ ಆಕ್ರೋಶದಿಂದ ಬುಸುಗುಟ್ಟುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೀನುಗಾರ ಮುಖಂಡರವಿರಾಜ್, ರಾಜ್ಯ ಸರ್ಕಾರ ಮೊದಲ ಬಜೆಟ್ನಲ್ಲಿ ಮೀನುಗಾರ ಸಮುದಾಯದ ನಿರ್ಲಕ್ಷ್ಯ ಮಾಡಿದಾಗ, ‘ಕುಮಾರಸ್ವಾಮಿ ಈಸ್ ನಾಟ್ ಮೈ ಸಿಎಂ’ ಎಂದು ಅಭಿಯಾನ ನಡೆಸಲಾಗಿತ್ತು. ಇಷ್ಟಾದರೂ ರಾಜ್ಯ ಸರ್ಕಾರ ಮೀನುಗಾರರ ಉಪೇಕ್ಷೆ ಮುಂದುವರಿಸಿತ್ತು. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಆರಂಭಿಸುವ ಮೂಲಕ ಮೀನುಗಾರರನ್ನು ಸ್ವಲ್ಪಮಟ್ಟಿಗೆ ಖುಷಿ ಪಡಿಸಿದೆ. ಹಾಗಾಗಿ ಸಹಜವಾಗಿಯೇ ಈ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಮೀನುಗಾರರು ಸೆಟೆದು ನಿಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಗಾಯದ ಮೇಲೆ ಬರೆ ಎಳೆದಂತೆ ಮೀನುಗಾರರ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ನಿಭಾಯಿಸಿದ ರೀತಿ, ಉಸ್ತುವಾರಿ ಸಚಿವರ ಅಸಾಮರ್ಥ್ಯ ಪ್ರಮುಖ ಚುನಾವಣಾ ವಿಷಯವಾಗಲಿದೆ. ಸದ್ಯ ಮೀನುಗಾರರಿಗೆ ಪೊಲೀಸ್ ಇಲಾಖೆ ಬಿಟ್ರೆ ಯಾರ ಮೇಲೂ ಭರವಸೆ ಉಳಿದಿಲ್ಲ. ಹೊಸದಾಗಿ ಅಧಿಕಾರ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮೀನುಗಾರರ ಪತ್ತೆ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ ಎಂದರು.