ವಿಜಯಪುರ : ಸ್ಟೋನ್ ಕ್ರಷರ್ ಹೊರ ಸೂಸುವ ಧೂಳಿನಿಂದ ರೈತರ ಫಲವತ್ತಾದ ಬೆಳೆಗಳಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಕ್ರಷರ್ ಬಂದ್ ಮಾಡಿಸುವಂತೆ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹಣಮಾಪುರ ಗ್ರಾಮದ 50ಕ್ಕೂ ಅಧಿಕ ರೈತರ ಜಮೀನುಗಳಲ್ಲಿ ಸ್ಟೋನ್ ಕ್ರಷರ್ ಧೂಳು ಬೆಳೆಗಳ ಮೇಲೆ ಬೀಳುತ್ತಿದೆ. ತಮ್ಮ ಬೆಳೆಗಳ ನಾಶವಾಗುತ್ತಿದೆ ಎಂದು ರೈತರು ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡರು.
ಸುಮಾರು 400 ಎಕರೆ ಕೃಷಿ ಭೂಮಿಗೆ ಕ್ರಷರ್ ಮಾರಕವಾಗಿದೆ. ಅಲ್ಲದೆ ಸಾಲ ಸೂಲ ಮಾಡಿ ಬಿತ್ತನೆ ಮಾಡಿದರೂ ಕ್ರಷರ್ ಧೂಳಿಗೆ ಬೆಳೆಗಳು ಹಾಳಾಗುತ್ತಿವೆ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅಲ್ಲದೆ ಹಣಮಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ನಂಬರ್ 174,175,176/2 ರಲ್ಲಿ ಕ್ರಷರ್‌ಗಳಿವೆ. ಅವುಗಳ ಬ್ಲಾಸ್ಟಿಂಗ್ ಪ್ರಭಾವಕ್ಕೆ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಕ್ರಷರ್‌ಗಳ ಹಾವಳಿ ಹೀಗೆ ಮುಂದುವರಿದರೆ ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.