ಬೆಂಗಳೂರು: ನಗರದಲ್ಲಿನ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಂಪನಿ ಆರಂಭಿಸಲು ಕೈಗೊಂಡಿರುವ ನಿರ್ಣಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನಗರದ ಘನತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತರು ಗುರುವಾರ ಸಭೆ ನಡೆಸಿದ್ದಾರೆ.
ಸಭೆಯ ನಡಾವಳಿಗಳನ್ನು ಕೋರ್ಟ್ ಗೆ ಸಲ್ಲಿಸಬೇಕಾಗಿದೆ. ಹಾಗೆಯೇ, ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಆರಂಭಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಬಿಬಿಎಂಪಿ ಆಯುಕ್ತರೇ ಆ ಕಂಪನಿಯ ಸಿಇಓ ಆಗಿರಲಿದ್ದಾರೆ ಎಂದು ವಿವರಿಸಿದರು.
ಬಿಬಿಎಂಪಿ ಪರ ವಕೀಲರು, ಸಭೆಯ ನಡಾವಳಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಘನತ್ಯಾಜ್ಯ ನಿರ್ವಹಣೆ ಮಾಡುವುದು ಪಾಲಿಕೆಯ ಜವಾಬ್ದಾರಿ. ಹೀಗಾಗಿ, ಬೇರೊಂದು ಸಂಸ್ಥೆಗೆ ತನ್ನ ಜವಾಬ್ದಾರಿಯನ್ನು ಒಪ್ಪಿಸುವ ಅಧಿಕಾರ ಪಾಲಿಕೆಗೆ ಇದೆಯೇ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು.
ಪಾಲಿಕೆ ಪರ ವಕೀಲರು ಉತ್ತರಿಸಿ, ಈ ಸಂಬಂಧ ಮಾಹಿತಿ ಪಡೆದು ತಿಳಿಸಲಾಗುವುದು. ಹಾಗೆಯೇ, ಈ ವಿಚಾರವಾಗಿ ಸರ್ಕಾರ ನೀತಿ ನಿರ್ಣಯ ಕೈಗೊಂಡಿದೆ. ಆದ್ದರಿಂದ ಸರ್ಕಾರದಿಂದ ವಿವರಣೆ ಪಡೆಯಬೇಕು ಎಂದು ಮನವಿ ಮಾಡಿದರು. ಹೇಳಿಕೆ ಪರಿಗಣಿಸಿದ ಪೀಠ, ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಂಪನಿ ಆರಂಭಿಸಲು ಕೈಗೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.