ಮಂಡ್ಯ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸುಧಾರಣೆ ತರುವ ಸಲುವಾಗಿ ಏಕಗವಾಕ್ಷಿ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ಇಲಾಖೆಯೊಳಗೆ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವುದು, ಗಣಿಗಾರಿಕೆ, ಕ್ರಷರ್ ನಡೆಸಲು ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕಿರುವುದು, ಕಟ್ಟಡ ಸಾಮಗ್ರಿಗಳ ಸಾಗಣೆ ವೇಳೆ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಈ ಏಕಗವಾಕ್ಷಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.
ರಾಜ್ಯದಲ್ಲಿ 6 ಸಾವಿರ ಗಣಿ ಪ್ರಕರಣಗಳು ಬಾಕಿ ಇವೆ. ಗಣಿ ಅದಾಲತ್ ನಡೆಸುವುದರೊಂದಿಗೆ ಈ ಪ್ರಕರಣ ಇತ್ಯರ್ಥಗೊಳಿಸಲು ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.
ಡ್ರೋನ್ ಸರ್ವೇಗೆ ಟೆಂಡರ್:
ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ಸರ್ಕಾರ ನಡೆಸಲು ಉದ್ದೇಶಿಸಿರುವ ಡ್ರೋನ್ ಸರ್ವೇಯನ್ನು ಶೀಘ್ರ ಆರಂಭಿಸಲಾಗುವುದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ನಡೆಸಿ ದಂಡ ವಿಧಿಸಿದ್ದರು. ಆ ನಂತರ ರಾಜ್ಯದ ವಿವಿಧ ಜಿಲ್ಲೆಗಳ ಗಣಿ ಮಾಲೀಕರು ಅಧಿಕಾರಿಗಳು ನಡೆಸಿರುವ ಸರ್ವೇ ವೈಜ್ಞಾನಿಕವಾಗಿಲ್ಲ. ತಮ್ಮ ಅನುಪಸ್ಥಿತಿ ಯಲ್ಲಿ ಸರ್ವೇ ಮಾಡಲಾಗಿದ್ದು, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಹೊಸದಾಗಿ ಡ್ರೋನ್ ಸರ್ವೇ ನಡೆಸಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲು ಉದ್ದೇಶಿಸಿ ಅಲ್ಪಾವಧಿ ಟೆಂಡರ್ ಕರೆಯಲಾಗುತ್ತಿದೆ. ಶೀಘ್ರವೇ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳ ಗಣಿ ಮಾಲೀಕರು ಅಧಿಕಾರಿಗಳು ನಡೆಸಿರುವ ಸರ್ವೇ ವೈಜ್ಞಾನಿಕವಾಗಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಸರ್ವೇ ಮಾಡಲಾಗಿದ್ದು, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಹೊಸದಾಗಿ ಡ್ರೋನ್ ಸರ್ವೇ ನಡೆಸಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲು ಉದ್ದೇಶಿಸಿ ಅಲ್ಪಾವಧಿ ಟೆಂಡರ್ ಕರೆಯಲಾಗುತ್ತಿದೆ ಎಂದು ಹೇಳಿದರು.
ಗಣಿ ಅಧಿಕಾರಿ ಪುಷ್ಪ ವಿರುದ್ಧ ಕ್ರಮ:
ಹಿಂದಿನ ಗಣಿ ಅಧಿಕಾರಿ ಟಿ.ವಿ. ಪುಷ್ಪಾ ಅವರು ಅಕ್ರಮ ಗಣಿಗಾರಿಕೆಗೆ ಬೆಂಬಲವಾಗಿ ನಿಂತಿದ್ದರೆಂಬ ಆರೋಪಗಳ ಕುರಿತು ತನಿಖೆ ನಡೆಸುವುದಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕರು, ಅರಣ್ಯ, ಕಂದಾಯ, ಪರಿಸರ, ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡವೊಂದನ್ನು ರಚಿಸಲಾಗಿದ್ದು, ಟಿ.ವಿ. ಪುಷ್ಪಾ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ವರ್ಗಾವಣೆಯಾಗಿರುವ ಜಾಗಕ್ಕೆ ಟಿ.ವಿ. ಪುಷ್ಪಾ ಅವರು ಹೋಗಿ ವರದಿ ಮಾಡಿಕೊಂಡಿಲ್ಲ ಎನ್ನುವುದು ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಎಷ್ಟು ದಿನಗಳೊಳಗೆ ಅವರು ಅಧಿಕಾರ ಸ್ವೀಕಾರ ಮಾಡಬೇಕು ಎಂಬ ಬಗ್ಗೆ ತಿಳಿದುಕೊಂಡು ಆ ಬಗ್ಗೆಯೂ ಕ್ರಮ ವಹಿಸುವುದಾಗಿ ಹೇಳಿದರು.
ಶೇ.100ರಷ್ಟು ಹಣ ಬಳಕೆ:
ಗಣಿ ಇಲಾಖೆಯ ಮಿನರಲ್ ಫಂಡ್‌ನಲ್ಲಿರುವ 4 ಕೋಟಿ ರು. ಹಣವನ್ನು ಪೂರ್ಣ ಪ್ರಮಾಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳುವುದಕ್ಕೆ ಶಾಸಕರಿಂದ ಒಪ್ಪಿಗೆ ದೊರಕಿದೆ. ಈ ಹಣದಲ್ಲಿ ಆಕ್ಸಿಜನ್ ಜನರೇಟರ್‌ಗಳು ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳನ್ನು ಖರೀದಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.
10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧ:
ಕೃಷ್ಣರಾಜಸಾಗರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಕೆ ಆರ್ ಎಸ್‌ಗೆ ಅಪಾಯವಾಗದಂತೆ ಎಚ್ಚರವಹಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಮಾಣದಲ್ಲಿ ಸ್ಫೋಟ ನಡೆಸಿದರೆ ಅಪಾಯವಾಗಲಿದೆ ಎಂಬ ಬಗ್ಗೆ ತಜ್ಞರು ವರದಿ ನೀಡಲಿದ್ದಾರೆ. ಅದಕ್ಕಾಗಿ ಪ್ರಾಯೋಗಿಕ ಸ್ಫೋಟ ನಡೆಸಬೇಕಿದೆ. ಪರಿಸ್ಥಿತಿ ಸುಧಾರಣೆಯಾದ ಬಳಿಕ ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.