ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಚುನಾವಣೆ ಬಳಿಕ ನಡೆದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಲಿದ್ದಾರೆ.
ಮೇ 13 ರಂದು ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಕೋಲ್ಕತ್ತಾದಿಂದ ಹೊರಡಲಿರುವ ಗವರ್ನರ್ ಧಂಕರ್ ಅವರು, ಪಶ್ಚಿಮ ಬಂಗಾಳದ ಸಿಟಾಲ್ಕುಚಿ ಮತ್ತು ಕೂಚ್‌ಬೆಹಾರ್‌ನ ಇತರ ಸ್ಥಳಗಳಿಗೆ ಭೇಟಿ ನೀಡಲಿದ್ದು, ಅಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬದೊಂದಿಗೆ ಸಂವಹನ ನಡೆಸಲಿದ್ದಾರೆ.
ನನ್ನ ಸಾಂವಿಧಾನಿಕ ಕರ್ತವ್ಯದ ಭಾಗವಾಗಿ, ನಾನು ರಾಜ್ಯದ ಪೀಡಿತ ಭಾಗಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ಅಲ್ಲಿಗೆ ತೆರಳಲು ವ್ಯವಸ್ಥೆಗಳನ್ನು ಮಾಡಲು ಸರ್ಕಾರವನ್ನು ಕೇಳಿದೆ. ದುರದೃಷ್ಟವಶಾತ್, ಅವರು ಹೆಚ್ಚು ಸ್ಪಂದಿಸಿಲ್ಲ. ಆದರೂ ನಾನು ನನ್ನ ವೇಳಾಪಟ್ಟಿಯೊಂದಿಗೆ ಮುಂದುವರಿಯುತ್ತೇನೆ. ರಾಜ್ಯದಲ್ಲಿ ಕಳೆದು ಹೋಗಿರುವ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು, ಪ್ರಜಾಪ್ರಭುತ್ವದ ಒಳಿತನ್ನು ಕಾಪಾಡಲು ಅವರು ಮಮತಾ ಸರ್ಕಾರಕ್ಕೆ ಕರೆ ನೀಡಿದ್ದಾರೆ.
ಚುನಾವಣೆಯ ಬಳಿಕ ನಡೆದ ಹಿಂಸಾಚಾರದಲ್ಲಿ ತನ್ನ ಪಕ್ಷದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿತ್ತು. ಆದರೆ, ತೃಣಮೂಲ ಕಾಂಗ್ರೆಸ್ ಆ ಆರೋಪಗಳನ್ನು ನಿರಾಕರಿಸಿದೆ.