ಬಸವಕಲ್ಯಾಣ(ಬೀದರ್) : ದಿನದಿಂದ ದಿನಕ್ಕೆ ಅತೀವವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಆದರೆ, ಈ ನಡುವೆ ಬಸವಕಲ್ಯಾಣ ತಾಲೂಕಿನ ಅತಲಾಪೂರ ಗ್ರಾಮದಲ್ಲಿ ಗ್ರಾಮಸ್ಥರು ಕೋವಿಡ್ ನಿಯಮ ಗಾಳಿಗೆ ತೂರಿ ಜಾತ್ರೆಯೊಂದನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಸರ್ಕಾರದ ಆದೇಶ ಧಿಕ್ಕರಿಸಿದ್ದು, ಬೆಳಕಿಗೆ ಬಂದಿದೆ.
ಅತಲಾಪೂರ ಗ್ರಾಮದಲ್ಲಿನ ಮಹಾದೇವ ಮಂದಿರದ ಜಾತ್ರೆಯನ್ನ ಅದ್ಧೂರಿಯಾಗಿ ಆಚರಣೆ ಮಾಡಿರುವ ಗ್ರಾಮಸ್ಥರು, ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಆದರೆ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅತಲಾಪೂರ ಗ್ರಾಮಸ್ಥರು ಜಾತ್ರೆ ಆಚರಣೆ ಮಾಡಿದ್ದು ಚರ್ಚೆಗೆ ಕಾರಣವಾಗಿದೆ.
ಜಾತ್ರೆ ನಿಮಿತ್ತ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ಬಹುತೇಕ ಜನರು ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿದೆ.
ಕೊರೊನಾದಿಂದಾಗಿ ನಿತ್ಯ ಹತ್ತಾರು ಜನ ಸಾವಿಗೀಡಾಗಿ, ನೂರಾರು ಜನ ಸೋಂಕಿಗೆ ಒಳಗಾಗುತ್ತಿದ್ದರೂ ಜನರು ಮಾತ್ರ ಜಾಗೃತರಾಗದೆ ಮನ ಬಂದಂತೆ ವರ್ತಿಸುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಸಭೆ- ಸಮಾರಂಭಗಳ ಮೇಲೆ ನಿಗಾ ವಹಿಸಬೇಕಿದ್ದ ನೋಡಲ್ ಅಧಿಕಾರಿಗಳು ನಿದ್ದೆಗೆ ಜಾರಿದಂತೆ ಕಂಡು ಬಂದಿದೆ.