ಬೆಂಗಳೂರು: ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟನ್ನು ಜನಪ್ರತಿನಿಧಿಗಳ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣವೇನು?
'ನನ್ನನ್ನು ಮದುವೆಯಾಗುತ್ತೇನೆ. ಪತ್ನಿಯ ಸ್ಥಾನ ನೀಡುತ್ತೇನೆ ಎಂದು ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದರು. ಆದರೆ ಮದುವೆಯಾಗದೇ ಮೋಸ ಮಾಡಿದ್ದಲ್ಲದೇ ಕಿರಿಯ ಸಹೋದರ ಶ್ರೀಕಾಂತದಾಸ್ ಅವರಿಂದ ನನಗೆ ಜೀವ ಬೆದರಿಕೆ ಹಾಕಿಸಿದ್ದಾರೆ’ ಎಂದು ಆರೋಪಿಸಿರುವ ಸಂತ್ರಸ್ತೆ ರಾಮದಾಸ್, ಶ್ರೀಕಾಂತದಾಸ್ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ 2014ರ ಫೆಬ್ರವರಿ 14ರಂದು ದೂರು ನೀಡಿದ್ದರು.
ಈ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಸಂತ್ರಸ್ತೆ, ‘ಬಿ’ ರಿಪೋರ್ಟ್ ರದ್ದುಗೊಳಿಸಬೇಕು ಎಂದು ಕೋರಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತೆ ವಿಚಾರಣೆ ನಡೆಸುವುದಿಲ್ಲ, ಫಿರ್ಯಾದುದಾರರು ನೀಡಿರುವ ಹೇಳಿಕೆ ಗಮನಿಸಿದಾಗ, ಇದು ಸಂಜ್ಞೆಯ ಅಪರಾಧವಾಗಿರುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತದೆ. ಆದ್ದರಿಂದ, ಇದು ವಿಚಾರಣೆಗೆ ಅರ್ಹವಾದ ಪ್ರಕರಣ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಆರೋಪಿಯು ಸಚಿವರಾಗಿದ್ದ ವೇಳೆ ತಡರಾತ್ರಿಯಲ್ಲಿ ಸಂತ್ರಸ್ತೆಯ ಮನೆಗೆ ಖಾಸಗಿ ಕಾರಿನಲ್ಲಿ ಬೆಂಗಾವಲು ಪಡೆ ಇಲ್ಲದೇ ಹೋಗುತ್ತಿದ್ದರು ಮತ್ತು ನಸುಕಿನಲ್ಲಿ ನಿರ್ಗಮಿಸುತ್ತಿದ್ದರು. ಆರೋಪಿ ಪ್ರಭಾವಿ ವ್ಯಕ್ತಿ ಎಂಬುದನ್ನು ಗಮನಿಸಿದಾಗ ಪೊಲೀಸರು ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯವು ರಾಮದಾಸ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 420 (ನಂಬಿಸಿ ವಂಚಿಸುವುದು) ಮತ್ತು 506ರ (ಜೀವ ಬೆದರಿಕೆ) ಅಡಿಯಲ್ಲಿ ಕೇಸು ದಾಖಲು ಮಾಡಿಕೊಂಡು ಅವರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಆದೇಶಿಸಿದೆ.