ಹಾಸನ: ಜನಸಂಖ್ಯೆ ಹೆಚ್ಚಾಗಿದ್ದರಿಂದ 2015ರಲ್ಲಿ ಪುರಸಭೆಯಿಂದ ನಗರಸಭೆ ಎಂದು ಮೇಲ್ದರ್ಜೆಗೆ ಏರಿಸಲಾಗಿತ್ತು. ಆದರೆ, ಇದಕ್ಕೆ ಅನುಗುಣವಾದ ಅಭಿವೃದ್ಧಿ, ಸ್ವಚ್ಛತೆ ಮಾತ್ರ ಗಗನ ಕುಸುಮವಾಗಿತ್ತು. ಪಾಲಿಕೆಯ ಸಿಬ್ಬಂದಿಯಿಂದ ಹಿಡಿದು ಯಂತ್ರಗಳು ತುಕ್ಕು ಹಿಡಿದಿದ್ದವೂ. ಮೇಲ್ದರ್ಜೆಗೇರಿದರು ಯಾವುದೇ ಬದಲಾವಣೆಯನ್ನು ಸಾರ್ವಜನಿಕರು ಕಂಡಿರಲಿಲ್ಲ.
ಈಗ ನಗರಸಭೆಯ ಆಯುಕ್ತರ ಬದಲಾವಣೆಯಿಂದ ಹೊಸ ಗಾಳಿ ಬೀಸಿದಂತಾಗಿದೆ. ಯಾಕೆಂದರೆ ನಗರಸಭೆಯ ಅಧಿಕಾರ ಕೈಗೆತ್ತಿಕೊಂಡ ಎರಡೇ ದಿನದಲ್ಲಿ ಸ್ವಚ್ಛತೆಯ ಕಾರ್ಯ ಯುದ್ಧೋಪಾದಿಯಲ್ಲಿ ಸಾಗುವಂತೆ ನೂತನ ಆಯುಕ್ತ ಚಲಪತಿ ಅವರು ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ನಗರಸಭೆಯನ್ನು ಸ್ವಚ್ಚ ಭಾರತ ನಿರ್ಮಾಣ ಯೋಜನೆ ಅಡಿಯಲ್ಲಿ ಯಶಸ್ವಿಯಾಗಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕಳೆದ ಒಂದು ದಶಕದಿಂದ ನಗರಸಭೆಯು ಗಬ್ಬುನಾರುತ್ತಿತ್ತು. ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚರಿಸುವ ಮಾರ್ಗ ಮಧ್ಯೆ ಅರಸೀಕೆರೆ ಸಮೀಪವಾಗುತ್ತದೆ. ವ್ಯಾಪಾರಕ್ಕೆಂದು ಬಂದವರು ಇಲ್ಲಿಯೇ ವಾಸವಾಗಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ಬರುವ 31 ಬಡಾವಣೆಗಳಲ್ಲಿ 20ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಸ್ವಚ್ಚತೆ ಇರಲಿಲ್ಲ. ಆಯುಕ್ತರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಮುಂಜಾನೆಯೆ ಸ್ವಚ್ಚಗೊಳಿಸಲು ಮುಂದಾದರು. ರೈಲ್ವೆ ನಿಲ್ದಾಣದ ದಾರಿಯಲ್ಲಿರುವ ಮೊಬೈಲ್ ಕ್ಯಾಂಟೀನ್ಗಳನ್ನು ಸ್ಥಳಾಂತರಿಸಿ, ರಸ್ತೆಯ ಎರಡು ಬದಿಯಲ್ಲೂ ಗಿಡಗಳನ್ನು ನೆಟ್ಟು ನಗರವನ್ನು ಚೊಕ್ಕಟಗೊಳಿಸಿದ್ದಾರೆ.
ಹಿಂದೂ ಶವ ಸಂಸ್ಕಾರದ ರುದ್ರಭೂಮಿಗೆ ಮೂಲಸೌಲಭ್ಯಗಳನ್ನು ವದಗಿಸುವ ಜತೆಗೆ ಸುತ್ತಲೂ ತಂತಿ ಬೇಲಿ ಹಾಕಿಸಲಾಗಿದೆ. ಅದರ ಭದ್ರತೆಗೆ ಕಾವಲುಗಾರರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.