ಬೆಂಗಳೂರು: ಜೀವನದಲ್ಲಿ ಒಮ್ಮೆಯಾದ್ರೂ ಇಡೀ ಭಾರತ ಸುತ್ತಾಡಬೇಕು. ಎಲ್ಲ ಜಾಗಗಳ ದರ್ಶನ ಮಾಡಿ ಕಣ್ತುಂಬಿಕೊಳ್ಳಬೇಕೆಂಬುದು ಎಲ್ಲರ ಆಸೆ.. ಹೀಗಾಗಿಯೇ, ಜನರ ಈ ಆಸೆಗೆ ರೈಲ್ವೆ ಇಲಾಖೆ ಕಳೆದ ವರ್ಷ ಭಾರತ್ ದರ್ಶನ್ ಹೆಸರಿನ ವಿಶೇಷ ರೈಲನ್ನು ಪರಿಚಯಿಸಿತ್ತು. ಆದರೆ ಈ ರೈಲಿನಲ್ಲಿ ಪ್ರಯಾಣ ಮಾಡಿಬಂದವರು, ದೊಡ್ಡ ನಮಸ್ಕಾರ. ಇನ್ಮುಂದೆ ಜೀವನದಲ್ಲಿ ರೈಲು ಪ್ರಯಾಣ ಮಾಡಬಾರದು ಎನ್ನುತ್ತಿದ್ದಾರೆ.
ತಮಿಳುನಾಡಿನ ಮಧುರೈನಿಂದ ಹೊರಡುವ ಈ ವಿಶೇಷ ರೈಲು ಉತ್ತರ ಭಾರತದ ಹಲವು ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತದೆ. ಇದೇ ತಿಂಗಳು 1 ರಿಂದ 10 ರವರೆಗೆ ಬೆಂಗಳೂರಿನಿಂದ ನೂರಾರು ಕನ್ನಡಿಗರು ಭಾರತ್ ದರ್ಶನ್ ರೈಲಿನಲ್ಲಿ ಹತ್ತು ದಿನಗಳ ಕಾಲ ಪ್ರವಾಸ ಅಂತ ಹೋಗಿ ಬಂದ್ದಿದ್ದಾರೆ. ಆದರೆ ಹೋಗಿದ್ದ ಪ್ರವಾಸಿಗರಿಗೆ ಆಗಿದ್ದು ಮಾತ್ರ ಭಾರತದ ದರ್ಶನವಲ್ಲ ಬದಲಾಗಿ ನರಕ ದರ್ಶನ.
ಕಾಶಿ, ಪುರಿ, ಭುವನೇಶ್ವರ್, ಗಯಾ, ತ್ರಿವೇಣಿ ಸಂಗಮ, ಕೋನಾರ್ಕ್, ಕೋಲ್ಕತ್ತಾ ಸೇರಿ ಹಲವು ಸ್ಥಳಗಳನ್ನು ನೋಡಬೇಕಿದ್ದವರು ಈ ಪೈಕಿ ಮೂರ್ನಾಲ್ಕು ಸ್ಥಳಗಳನ್ನಷ್ಟೇ ಅರ್ಧಂಬರ್ಧ ನೋಡಿಕೊಂಡು ಬೆಂಗಳೂರು ಸೇರುವಂತಾಗಿದೆ.10 ದಿನಗಳ ಈ ಪ್ರವಾಸಕ್ಕೆ ಪ್ಯಾಕೇಜ್ ಒಬ್ಬರಿಗೆ 9500 ರೂಪಾಯಿ. ಸಾವಿರಾರು ರೂಪಾಯಿ ಹಣ ವೆಚ್ಚ ಮಾಡಿ, ನೀರಲ್ಲಿ ಹೋಮ ಮಾಡುವಂತಾಗಿದೆ.
ಕಾರಣ ಏನು?
ರೈಲಿನಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಅತ್ಯಂತ ಕಳಪೆಯಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ರೈಲಿನಲ್ಲಂತೂ ಕಳಪೆ ಊಟ, ನೀರಿಲ್ಲದ ವಾಷ್ ರೂಂ, ತಿರುಗದ ಫ್ಯಾನ್ ನಡುವೆಯೇ ಪ್ರಯಾಣ ಮಾಡಿದ್ದಾರೆ. ವಯಸ್ಸಾದವರೇ ಹೆಚ್ಚಿಗೆ ಇದ್ದ ಕಾರಣ ಹಲವರಿಗೆ ಮಧ್ಯೆ ಅನಾರೋಗ್ಯ ಕಾಣಿಸಿಕೊಂಡಿದೆ. ತಮ್ಮ ಸಮಸ್ಯೆಯನ್ನ ಸಂಬಂಧಪಟ್ಟವರಿಗೆ ಹೇಳೋಣವೆಂದರೆ, ಭಾಷೆ ಸಮಸ್ಯೆ ಎದುರಾಗಿದೆ ಅಂತಾರೆ ಪ್ರಯಾಣಿಕರು.
ರೈಲಿನಲ್ಲಿ ಕೊಟ್ಟ ಉಪ್ಪಿನಕಾಯಿಯಲ್ಲಿ ಇತ್ತು ಜಿರಲೆ
ಇನ್ನು ಕಳಪೆ ಗುಣಮಟ್ಟದ ಆಹಾರ ನೀಡಿದ್ದಾರೆ ಎನ್ನುತ್ತಿರುವ ಪ್ರಯಾಣಿಕರು, ಉಪ್ಪಿನಕಾಯಿಯಲ್ಲಿ ಜಿರಲೆ ಕಂಡು ತಬ್ಬಿಬ್ಬುಗೊಂಡಿದ್ದಾರೆ. ಇನ್ಮುಂದೆ ನಮ್ಮಂತೆ ಯಾರು ತಪ್ಪು ಕೆಲಸ ಮಾಡಬೇಡಿ, ಯಾರು ಈ ಭಾರತ್ ದರ್ಶನ್ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬೇಡಿ ಅಂತ ತಿಳಿಸಿದ್ದಾರೆ.