ಕೊರೊನಾ ವೈರಸ್ನ ಎರಡನೇ ಅಲೆ ಆರಂಭವಾಗಿದ್ದು ಈಗಾಗಲೇ ಲಾಕ್ಡೌನ್ ಕೂಡಾ ವಿಧಿಸಲಾಗಿದೆ. ಇದರ ಜೊತೆಗೆ ಕೋವಿಡ್ ಕಾರಣದಿಂದಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 8ರ ಪ್ರಸಾರವನ್ನು ಕೂಡಾ ಅರ್ಧದಲ್ಲಿಯೇ ನಿಲ್ಲಿಸಬೇಕಾಯಿತು. ಅದೇ ಕಾರಣದಿಂದ ಅರ್ಧದಿಂದಲೇ ದೊಡ್ಮನೆಯಿಂದ ಬಂದಿರುವ ಸ್ಪರ್ಧಿಗಳು ಈಗ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಗುಳಿಕೆನ್ನೆ ಚೆಲುವೆ ವೈಷ್ಣವಿ ಈ ಬಗ್ಗೆ ಮಾತನಾಡಿದ್ದಾರೆ. "ಬಿಗ್‌ಬಾಸ್ ಸ್ಪರ್ಧಿಯಾಗಿ ದೊಡ್ಮನೆಗೆ ಹೋಗಿದ್ದ ಕಾರಣ ತುಂಬಾ ದಿನಗಳಿಂದ ನಾನು ಕುಟುಂಬದಿಂದ ದೂರವುಳಿದಿದ್ದೆ. ಬಿಗ್ ಬಾಸ್ ಮನೆಯಲ್ಲಿದ್ದಾಗಂತೂ ನಾನು ಮನೆಯವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಇದೀಗ ಮನೆಯವರೊಂದಿಗೆ ಕಾಲ ಕಳೆಯಲು ಲಾಕ್ಡೌನ್ ನೆಪವಾಗಿದೆ. ಲಾಕ್ಡೌನ್ನಿಂದಾಗಿ ಎಲ್ಲರೂ ಮನೆಯಲ್ಲಿರುತ್ತಾರೆ. ನಾನು ಈಗ ಕುಟುಂಬಸ್ಥರ ಜೊತೆ ಆರಾಮವಾಗಿ ಕಾಲ ಕಳೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
"ಕೊರೊನಾ ವೈರಸ್ನ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಅದೇ ಕಾರಣದಿಂದ ಇದು ಮಗದಷ್ಟು ಹೆಚ್ಚಾಗಬಾರದು ಎಂಬ ಸದುದ್ದೇಶದಿಂದ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಈ ಲಾಕ್ಡೌನ್ ಅನ್ನು ಯಶಸ್ವಿಗೊಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಒಬ್ಬ ಪ್ರಜೆಯಾಗಿ ನಾನು ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ. ನೀವು ಕೂಡಾ ಇದನ್ನು ನಿರ್ವಹಿಸಿ" ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
"ಪ್ರಸ್ತುತ ಸಮಯದಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾದುದು ಅತೀ ಅಗತ್ಯ. ಆರೋಗ್ಯವೇ ಭಾಗ್ಯ. ಆರೋಗ್ಯದ ಕಾಳಜಿ ಮಾಡಬೇಕಾದುದು ತುಂಬಾ ಮುಖ್ಯ. ಯಾಕೆಂದರೆ ಆರೋಗ್ಯ ಚೆನ್ನಾಗಿದ್ದರೆ ಮುಂದೆ ಏನು ಬೇಕಾದರೂ ಮಾಡಬಹುದು" ಎಂದು ಹೇಳಿದ್ದಾರೆ ವೈಷ್ಣವಿ ಗೌಡ.