ಬೆಳಗಾವಿ: ನಗರದ ಖಡೇಬಜಾರ್, ಗಣಪತಿ ಗಲ್ಲಿ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿರುವ ಅಂಗಡಿಗಳನ್ನು ಪೊಲೀಸರು ಇಂದು ಮಧ್ಯಾಹ್ನವೇ ದಿಢೀರ್ ಬಂದ್ ಮಾಡಿಸುತ್ತಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ವಾಹನದಲ್ಲಿ ಆಗಮಿಸಿರುವ ಪೊಲೀಸರು, ಮೈಕ್ ಮೂಲಕ ಅಂಗಡಿ ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ. ಮೆಡಿಕಲ್ ಶಾಪ್, ದಿನಸಿ ಅಂಗಡಿ ಹೊರತುಪಡಿಸಿ ಇನ್ನುಳಿದ ಅಂಗಡಿಗಳನ್ನು ಪೊಲೀಸರು ಏಕಾಏಕಿ ಬಂದ್ ಮಾಡಿಸುತ್ತಿದ್ದಾರೆ. ಯಾವುದೇ ಮಾಹಿತಿ ಇಲ್ಲದೆ ಪೊಲೀಸರು ಅಂಗಡಿಗಳ ಬಾಗಿಲು ಮುಚ್ಚಿ ಎಂದು ಹೇಳುತ್ತಿದ್ದು, ವ್ಯಾಪಾರಿಗಳು ಶಾಕ್ಗೆ ಒಳಗಾಗಿದ್ದಾರೆ.
ಮದುವೆ ಸೀಸನ್ ಆದ ಕಾರಣ ಜನರು ಬಟ್ಟೆ, ಬಂಗಾರ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗೆ ಬೆಳಗಾವಿಗೆ ಬರುತ್ತಿದ್ದಾರೆ. ಆದರೆ ಪೊಲೀಸರು ಮಧ್ಯಾಹ್ನವೇ ಅಗತ್ಯವಲ್ಲದ ಮಳಿಗೆಗಳನ್ನು ಮುಚ್ಚಿಸುತ್ತಿದ್ದಾರೆ. ಮದುವೆ ಸೀಸನ್ ಹಿನ್ನೆಲೆಯಲ್ಲಿ ಈಗಷ್ಟೇ ವ್ಯಾಪಾರ-ವಹಿವಾಟು ತುಸು ಚೇತರಿಸಿಕೊಳ್ಳುತ್ತಿದೆ. ಪೊಲೀಸರು ಅದಕ್ಕೂ ಅಡ್ಡಿಪಡಿಸುತ್ತಿದ್ದು, ಬಾಡಿಗೆ ಕಟ್ಟುವುದು ಕಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ವೀಕೆಂಡ್ ಕರ್ಫೂ ಬಗ್ಗೆ ಜನರಿಗೆ ಮಾಹಿತಿ ಇದೆ. ಆದರೀಗ ಏಕಾಏಕಿ ಅಂಗಡಿ-ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸುತ್ತಿದ್ದು, ನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇನ್ನು ಜಿಲ್ಲೆಯ ವಿವಿಧ ಭಾಗಗಳಿಂದ ಶಾಪಿಂಗ್‌ಗೆ ಎಂದು ಆಗಮಿಸಿರುವ ಜನರು ಶಾಪ್ ಮುಚ್ಚಿರುವ ಕಾರಣಕ್ಕೆ ತಮ್ಮೂರಿಗೆ ತೆರಳುತ್ತಿದ್ದಾರೆ.