ಬಳ್ಳಾರಿ: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಮತ್ತು ಬಳ್ಳಾರಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಈ ಬಾರಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ.
ಜಿಲ್ಲೆಯ ಸಂಡೂರು, ಹೂವಿನ ಹಡಗಲಿ, ಕಮಲಾಪುರ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಗೆ ಬರುವ ಹರಪನಹಳ್ಳಿ ಪಟ್ಟಣ ಪಂಚಾಯತ್ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ನಗರ, ಸ್ಥಳೀಯ ಸಂಸ್ಥೆಗಳ ಮತದಾರರು ಮೊದಲ ಆದ್ಯತೆ ನೀಡಿದ್ದಾರೆ.
ಎರಡನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಪಕ್ಷೇತರರು ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಜಿಲ್ಲೆಯ ಸಂಡೂರು ಪುರಸಭೆ ವ್ಯಾಪ್ತಿಯ ನಾಲ್ಕನೇ ವಾರ್ಡಿನ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸಮನಾಂತರ ಮತಗಳು ಬಂದಿದ್ದವು. ಬಳಿಕ ಟಾಸ್ ಮೂಲಕ ಉಭಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
10 ನೇ ವಾರ್ಡಿನಲ್ಲಿ ಬಿಜೆಪಿಯ ಲಕ್ಷ್ಮೀ 320 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಪ್ರತಿಮಾ 319 ಮತಗಳನ್ನು ಗಳಿಸಿದ್ದು, ಕೇವಲ ಒಂದು ಮತಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ರಾಜ್ಯದಲ್ಲಿ ಮೋದಿ ಹವಾ ಇಲ್ಲ: ರಾಜ್ಯದಲ್ಲಿ ಮೋದಿ ಹವಾ ಇಲ್ಲ ಎಂಬುದಕ್ಕೆ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಸಾಕ್ಷಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಹಡಗಲಿ, ಹರಪನಹಳ್ಳಿ, ಸಂಡೂರು ಪುರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದಾರೆ ಎಂದರು.
ಮೈತ್ರಿಕೂಟ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ. ಬಳ್ಳಾರಿಯ ಇಬ್ಬರ ಸಚಿವರ ಪೈಕಿ ಒಬ್ಬರ ತಲೆದಂಡ ಆಗಲಿದೆ ಎಂಬ ಮಾಹಿತಿಯಿದೆ. ಆ ಕುರಿತ ತಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೈಕಮಾಂಡ್ ಆದೇಶದಂತೆ ಕೆಲಸ ಮಾಡುವೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರ ವಿರುದ್ಧ ಲಾಡ್ ಕಿಡಿ: ಜಿಲ್ಲಾ ಕಾಂಗ್ರೆಸ್ ನ ಪ್ರಚಾರ ಸಮಿತಿಯ ಅಧ್ಯಕ್ಷರು ಕಾಂಗ್ರೆಸ್ ವಿರೋಧಿಯಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಎರಡರಿಂದ ಮೂರು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅವರ ವಿರುದ್ಧ ರಾಜ್ಯ ನಾಯಕರಿಗೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.