ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಇರುವಾಗಲೇ ದೇಶದ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಮುಂದಿನ ನಾಯಕತ್ವ ಕುರಿತ ಚರ್ಚೆ ಜೋರಾಗಿದೆ. ಇದನ್ನು ಕೂಡಲೇ ನಿಯಂತ್ರಿಸದಿದ್ದರೆ ಹೈಕಮಾಂಡ್ಡ್ಗೆ ಇದೊಂದು ದೊಡ್ಡ ತಲೆ ಬಿಸಿಯಾಗುವಲ್ಲಿ ಸಂಶಯವಿಲ್ಲ.
ಕರ್ನಾಟಕದಲ್ಲಿ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಪಂಜಾಬ್ನಲ್ಲಿ ಸದ್ಯ ಅಧಿಕಾರದಲ್ಲಿದೆ. ಹೀಗಿರುವಾಗ ಈ ಎರಡು ರಾಜ್ಯದಲ್ಲಿ ನಾಯಕತ್ವದ ವಿಚಾರದ ಪ್ರಸ್ತಾಪ ಆಗುತ್ತಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬಹುದಾದ ಅವಕಾಶ ಕಾಂಗ್ರೆಸ್ಗೆ ಇದೆ. ಇನ್ನು ಪಂಜಾಬ್ನಲ್ಲಿ ಭಾರಿ ಬಹುಮತ ಹೊಂದಿರುವ ಕಾಂಗ್ರೆಸ್ ಇನ್ನೊಮ್ಮೆ ಅಧಿಕಾರಕ್ಕೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಪಕ್ಷ ಸಂಘಟನೆಗೆ ಇದು ಸಕಾಲ:
ಆಡಳಿತ ಪಕ್ಷದ ವೈಫಲ್ಯ ತೋರಿಸಿ ಕರ್ನಾಟಕದಲ್ಲಿ ಹಾಗೂ ಸರ್ಕಾರ ಅಧಿಕಾರ ನಡೆಸಲು ಸಮರ್ಥವಾಗಿದೆ ಎನ್ನುವುದನ್ನು ಪಂಜಾಬ್ನಲ್ಲಿ ತೋರಿಸಬೇಕಿದೆ. ಇದು ಅನ್ಯ ರಾಜ್ಯಗಳಿಗೆ ಮಾದರಿಯಾಗಲಿದೆ. ಆದರೆ, ಈ ಎರಡು ರಾಜ್ಯಗಳಲ್ಲಿ ಎದ್ದಿರುವ ಮುಂದಿನ ನಾಯಕತ್ವದ ಕೂಗು ಇಡೀ ದೇಶಕ್ಕೇ ವ್ಯತಿರಿಕ್ತ ಸಂದೇಶವನ್ನು ಸಾರುತ್ತಿದೆ.
ಸಂಘಟನೆಯ ಬಲವನ್ನೇ ಕುಗ್ಗಿಸುತ್ತಿದೆ:
ಇದೇ ಸ್ಥಿತಿ ಮುಂದುವರಿದರೆ ಇತರೆ ರಾಜ್ಯಗಳಲ್ಲಿಯೂ ಸಂಘಟನೆಗಿಂತ ನಾಯಕತ್ವ ದೊಡ್ಡ ಪಾಲು ಪಡೆಯಲಿದೆ. ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ನಾಯಕರು ಮುಂದಿನ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ ಸೇರಿದಂತೆ ಸಾಲು ಸಾಲು ಹೆಸರುಗಳು ಕೇಳಿಬರುತ್ತಿವೆ. ಆದರೆ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಬೇಕಾದ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ನಾಯಕರ ಕಿತ್ತಾಟ ಪಕ್ಷದ ಪ್ರಾಭಲ್ಯಕ್ಕೆ ಕುತ್ತು ತರಲಿದೆ.
ಇದೇ ರೀತಿ ಪಂಜಾಬ್ನ ಸಿಎಂ ಅಮರೀಂದರ್ ಸಿಂಗ್ ವಿರುದ್ಧ ಮುನಿಸಿಕೊಂಡಿರುವ ನವಜೋತ್ ಸಿಂಗ್, ಸಿದ್ದು ತಮ್ಮನ್ನು ಮುಂದಿನ ಸಿಎಂ ಅಭ್ಯರ್ಥಿಯಾಗಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಅವಕಾಶ ಇರುವ ಕಡೆ ನಾಯಕತ್ವದ ದನಿ ಎದ್ದಿರುವುದು ಪಕ್ಷದ ಹೈಕಮಾಂಡ್ ನಾಯಕರಿಗೆ ಮುಜುಗರ ತರಿಸಿದೆ. ಸದ್ಯ ತಾತ್ಕಾಲಿಕವಾಗಿ ನಾಯಕರನ್ನು ಸುಮ್ಮನಾಗಿಸುವ ಯತ್ನ ನಡೆಸಿರುವ ಹೈಕಮಾಂಡ್ ಇಂತಹ ಕೂಗಿದೆ ಶಾಶ್ವತ ಕಡಿವಾಣ ಹಾಕಲು ಸಿದ್ಧತೆ ನಡೆಸಿದೆ.
ಹೈಕಮಾಂಡ್ ಮಧ್ಯಸ್ಥಿಕೆ:
ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್ ನಾಯಕರನ್ನು ಮೀರಿ ಮುಂದುವರಿಯುವುದನ್ನು, ಹೇಳಿಕೆ ನೀಡುವುದನ್ನು ತಡೆಯಲು ಮುಂದಾಗಿರುವ ನಾಯಕರು ರಾಜ್ಯ ಮಟ್ಟದಲ್ಲಿ ನಾಯಕತ್ವದ ದನಿ ಎತ್ತಿದವರನ್ನು ಕರೆಸಿ ಬುದ್ದಿವಾದ ಹೇಳುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ರಾಜ್ಯ ಉಸ್ತುವಾರಿಗಳನ್ನು ಕಳಿಸಿ ಅಲ್ಲಿನ ಇತರೆ ನಾಯಕರನ್ನು ಕರೆಸಿ ಮಾತನಾಡಿ, ಅಪಸ್ವರ ಎತ್ತಿರುವ ನಾಯಕರ ಜತೆ ಸಮಾಲೋಚಸಿ, ಪಕ್ಷದ ಹೈಕಮಾಂಡ್ ಸರ್ವಸ್ವ. ಇವರು ಹೇಳಿದ್ದೇ ಕಡೆಯ ಮಾತು. ನಾಯಕತ್ವದ ಜವಾಬ್ದಾರಿ ನೀಡುವುದು ಪಕ್ಷದ ಹೈಕಮಾಂಡ್ ಎಂದು ಹೇಳಿ ತಿಳಿಸಿ ಬರಲು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಂದಿನ ಕೆಲ ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇಲ್ಲಿನ ನಾಯಕರೊಂದಿಗೆ ಚರ್ಚಿಸಲಿದ್ದಾರೆ.ಇದೇ ಕಾರ್ಯ ಸದ್ಯ ಪಂಜಾಬ್ ವಿಚಾರದಲ್ಲೂ ಆಗಿದೆ. ಸಿದ್ದು ಅವರನ್ನು ಕರೆಸಿ ಹೈಕಮಾಂಡ್ ನಾಯಕರು ಸಮಾಲೋಚಿಸಿದ್ದಾರೆ. ಇದಲ್ಲದೇ ಮುಂದಿನ ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಆ ಸಂದರ್ಭ ನಾಯಕತ್ವದ ವಿಚಾರವಾಗಿ ರಾಜ್ಯ ನಾಯಕರಲ್ಲಿ ತಿಕ್ಕಾಟ ಆರಂಭವಾದರೆ ಅಧಿಕಾರಕ್ಕೆ ಬರುವ ಅವಕಾಶ ಕೈತಪ್ಪಲಿದೆ. ಇಂತಹ ಸನ್ನಿವೇಶ ಸೃಷ್ಟಿಯಾಗದಿರಲಿ ಎಂಬ ಉದ್ದೇಶದಿಂದ ಎಚ್ಚೆತ್ತುಕೊಂಡಿರುವ ಹೈಕಮಾಂಡ್ ನಾಯಕರು ಎರಡು ರಾಜ್ಯದಲ್ಲಿ ಎದ್ದಿರುವ ನಾಯಕತ್ವದ ಕೂಗನ್ನು ತಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ. ಅದು ಎಷ್ಟರ ಮಟ್ಟಿನ ಯಶಸ್ಸು ಕಾಣಲಿದೆ ಎನ್ನುವುದು ಸದ್ಯದ ಕುತೂಹಲ.