ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಎಲ್ಲರ ಗಮನ ಸೆಳೆದಿದ್ದು ಅಮಿತ್ ಷಾ. 80 ರ ದಶಕದಿಂದ ಮೋದಿಯ ಅತ್ಯಂತ 'ನಂಬಿಕೆಯ ಬಂಟ' ಎಂದೇ ಕರೆಯಲಾಗುವ ಅಮಿತ್ ಷಾ ಕೇಂದ್ರ ಸಚಿವರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇಂದ್ರ ಸಚಿವರ ಪಟ್ಟಿಯನ್ನು ನೋಡುತ್ತಾ ಹೋದರೆ, ಮೋದಿ ಬಿಟ್ಟರೆ, ಅಮಿತ್ ಷಾ ಪಕ್ಷ ಮಾತ್ರವಲ್ಲ ಸರ್ಕಾರದಲ್ಲೂ ಅತ್ಯಂತ ಪ್ರಭಾವಿ ಸಚಿವರಾಗಿ ಹೊರ ಹೊಮ್ಮಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಎರಡನೇ ಅವಧಿಯ ಎನ್‌ಡಿಎ ಸರ್ಕಾರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ಬಿಜೆಪಿಯ ಚಾಣಕ್ಯ, 1980 ರಿಂದಲೂ ಗುಜರಾತ್ ರಾಜಕೀಯದಿಂದ ಮೋದಿ ಜೊತೆಯಾಗಿದ್ದಾರೆ. ಇಬ್ಬರೂ ಹೆಚ್ಚೂ ಕಡಿಮೆ ಒಂದೇ ಕಾಲಾವಧಿಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಕಳೆದ 3 ದಶಕದಿಂದಲೂ ಇಬ್ಬರೂ ಸಹೋದರರ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯವರ ಹಿಂದಿನ ಬಹುದೊಡ್ಡ ಶಕ್ತಿಯಾಗಿರುವ ಅಮಿತ್ ಷಾ, ಕೇಂದ್ರದಲ್ಲಿ ಸಚಿವ ಸ್ಥಾನ ಅಲಂಕರಿಸುವ ಮೂಲಕ ಸರ್ಕಾರದ ಸಾಧನೆಗಳಿಗೆ ಚೈತನ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಗುಜರಾತ್ ಸರ್ಕಾರದಲ್ಲಿ ಈ ಹಿಂದೆ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಷಾ, ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.ಲೋಕಸಭೆಗೆ ಪ್ರವೇಶ ಕೊಡುವುದಕ್ಕೂ ಮುನ್ನ ರಾಜ್ಯಸಭೆ ಸದಸ್ಯರಾಗಿರುವ ಅಮಿತ್ ಷಾ, ಮೊದಲ ಪ್ರಯತ್ನದಲ್ಲೇ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಅಲಂಕರಿಸೋಕೆ ಮುಂದಾಗಿದ್ದಾರೆ.
ಗುಜರಾತ್‌ನಲ್ಲಿ ಈ ಹಿಂದೆ ಜಯಭೇರಿ ಬಾರಿಸಿ ಸಿಎಂ ಗಾದಿಗೇರುತ್ತಿದ್ದ ಮೋದಿ, ಹಿಂದೆ ಇದ್ದಿದ್ದು ಇದೇ ಷಾ. ಚಾಣಕ್ಯನ ಸಾಧನೆ, ನಿಷ್ಠೆಗಾಗಿ ಅವರಿಗೆ ಗುಜರಾತ್ ಸರ್ಕಾರದಲ್ಲಿ ಹತ್ತು ಮಹತ್ವದ ಪೋರ್ಟ್‌ಪೋಲಿಯೋಗಳನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಮೋದಿ ಕೊಟ್ಟಿದ್ದರು. ಗೃಹ, ಕಾನೂನು ಮತ್ತು ನ್ಯಾಯ, ಕಾರಾಗೃಹ, ಗಡಿ ಭದ್ರತೆ ಹಾಗು ವಸತಿ ಸೇರಿದಂತೆ ಅನೇಕ ಖಾತೆಗಳನ್ನು ಒಟ್ಟಿಗೆ ನಿಭಾಯಿಸಿದ ಅಮಿತ್ ಷಾ ಮೋದಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಈ ಎಲ್ಲಾ ಅನುಭವ, ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಸಾಧನೆಯನ್ನು ಪರಿಗಣಿಸಿದ ಮೋದಿ, ಅಮಿತ್ ಷಾ ಅವರಿಗೆ ಇದೀಗ ತನ್ನ ಸಚಿವ ಸಂಪುಟದಲ್ಲಿ ಮಹತ್ವದ ಖಾತೆ ನೀಡಿ ಪುರಸ್ಕರಿಸಲು ಮುಂದಾಗಿದ್ದಾರೆ.