ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ನೀಲನಕೊಪ್ಪಲು ಗ್ರಾಮದ ಸರ್ವೆ ನಂ-18 ರ ಅರಣ್ಯ ಪ್ರದೇಶದಲ್ಲಿ ಬ್ರಹ್ಮಲಿಂಗೇಶ್ವರ ಸ್ಟೋನ್ ಕ್ರಷರ್‌ಗಳ ಮೂಲಕ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಇಲಾಖೆ ಅಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಅರಣ್ಯ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಕ್ರಷರ್ ಮಾಲೀಕ ರಾಮಕೃಷ್ಣ, ಬ್ರಹ್ಮಲಿಂಗೇಶ್ವರ ಸ್ಟೋನ್ ಕ್ರಷರ್ ಹೆಸರಿನಲ್ಲಿ ಅನಧಿಕೃತವಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೆ, ಸಮೀಪದ ಊರಿಗೆ ತೊಂದರೆಯಾಗುತ್ತಿದೆ ಎಂದು ನೀಲನಕೊಪ್ಪಲು ಗ್ರಾಮದ ದಲಿತ ಮುಖಂಡ ಶ್ರೀಕಂಠ ಎಂಬುವರು ನೀಡಿದ ದೂರಿನ ಮೇರೆಗೆ ಮೈಸೂರು ವಿಭಾಗದ ಗಣಿ ಅಧಿಕಾರಿ ನಂಜುಂಡಸ್ವಾಮಿ ನೇತೃತ್ವದ ತಂಡ ಭೇಟಿ ನೀಡಿ ದಾಖಲಾತಿ ಸೇರಿದಂತೆ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳೀಯ ಗ್ರಾಮಸ್ಥರು ಕೂಡ ಪರಿಶೀಲನೆಗೆ ಬಂದ ಅಧಿಕಾರಿಗಳ ಬಳಿ ದೂರು ನೀಡಿ ಅಕ್ರಮ ಕ್ರಷರ್ ನಿಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಅಧಿಕಾರಿಗಳು ಕ್ರಷರ್ ಮಾಲೀಕರ ದಾಖಲಾತಿ ಪರಿಶೀಲನೆ ಕ್ರಷರ್ ನಿಲ್ಲಿಸುವ ಬಗ್ಗೆ ಜನರಿಗೆ ಭರವಸೆ ನೀಡಿದ್ದಾರೆ.