ಹುಬ್ಬಳ್ಳಿ: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ 152 ರನ್ಗಳ ಅಂತರದಿಂದ ಭಾರತ ಎ ತಂಡ 2-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 205 ರನ್ಗಳಿಂದ ಜಯ ಸಾಧಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ 152 ರನ್ಗಳಿಂದ ಶ್ರೀಲಂಕಾವನ್ನು ಮಣಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 57 ರನ್ಗಳ ಮುನ್ನಡೆ ಸಾಧಿಸಿದ್ದ ಭಾರತ ಎ ತಂಡ ಶ್ರೀಲಂಕಾಗೆ 430 ರನ್ಗಳ ಟಾರ್ಗೆಟ್ ನೀಡಿತ್ತು. ಮೂರನೇ ದಿನವೇ 210 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಲಂಕಾ ಇಂದು ಆ ಮೊತ್ತಕ್ಕೆ 65 ರನ್ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 152 ರನ್ಗಳ ಸೋಲನುಭವಿಸಿತು.
ಲಂಕಾ ಪರ ಭಾನುಕ ರಾಜಪಕ್ಷೆ 110 ಹಾಗೂ ಕಮಿಂಡು ಮಂಡಿಸ್ 46 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಪರ ಪ್ರಚಂಡ ಬೌಲಿಂಗ್ ಪ್ರದರ್ಶನ ನೀಡಿದ ರಾಹುಲ್ ಚಹಾರ್ 5, ಶಿವಂ ದುಬೆ 2, ಆದಿತ್ಯ ಸರ್ವಾಟೆ, ಸಮದೀಪ್ ವಾರಿಯರ್ ಹಾಗೂ ಜಯಂತ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ಭಾರತ ತಂಡ ಲಂಕಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮೊದಲ ಮೂರು ಪಂದ್ಯ ಜೂ. 6, 8 ಹಾಗೂ 10ರಂದು ಬೆಳಗಾವಿಯಲ್ಲಿ ನಡೆಯಲಿವೆ. ಕೊನೆಯ 2 ಪಂದ್ಯ ಜೂನ್ 13 ಹಾಗೂ 15 ರಂದು ಹುಬ್ಬಳ್ಳಿಯಲ್ಲಿ ನಡೆಯಲಿವೆ.